ಸಿರುಗುಪ್ಪ: ತಾಲೂಕಿನ ದರೂರು ಗ್ರಾಮದ ಕ್ರಾಸ್ ನಲ್ಲಿ ಗುರುವಾರ ಸಂಜೆ 3 ಗಂಟೆಗೆ ಬೀಸಿದ ಭಾರಿ ಗಾಳಿ, ಎರಡು ಗಂಟೆ ಸುರಿದ ಮಳೆಯ ಆರ್ಭಟಕ್ಕೆ ಬೃಹತ್ ಗಾತ್ರದ ಮೊಬೈಲ್ ಟವರ್ ಉರುಳಿದ ಘಟನೆ ಗುರುವಾರ ನಡೆದಿದೆ.
ಗುರುವಾರ ಸಂಜೆ ಬೀಸಿದ ಗಾಳಿ ಸಹಿತ ಮಳೆಗೆ ಮೊಬೈಲ್ ಟವರ್ ಕಾಂಕ್ರಿಟ್ ಸಹಿತ ಕಿತ್ತು, ಹೊಸಳ್ಳಿ ಮತ್ತು ಹಾಗಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಹಾಗೂ ರಸ್ತೆ ಪಕ್ಕದಲ್ಲಿದ್ದ ವೀರನಗೌಡ ಎನ್ನುವವರ ಮನೆ ಮುಂದಿನ ಶೆಡ್ ಮೇಲೆ ಬಿದ್ದಿದ್ದು,ಶೆಡ್ ಬಹುತೇಕ ಹಾನಿಗೊಳಗಾಗಿದೆ.
ಮೊಬೈಲ್ ಟವರ್ ಬಿದ್ದ ರಭಸಕ್ಕೆ ಐದು ವಿದ್ಯುತ್ ಸಂಪರ್ಕದ ಕಂಬಗಳು ಬಿದ್ದು ಮುರಿದಿವೆ.
ಘಟನೆಯಲ್ಲಿ ಅಂಗಡಿ ನಾಗರಾಜ್ ಎನ್ನುವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಸ್ಥಳಕ್ಕೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್‌ಐ.ಸದ್ದಾಂ ಹುಸೇನ್, ಸಿರಿಗೇರಿ ಕ್ರಾಸ್ ಜೆಸ್ಕಾಂ ಇಲಾಖೆಯ ಎಂಜಿನಿಯರ್ ಕೇಶವ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ನವೀನ್ ಕುಮಾರ್ ಸ್ಥಳ ಪರಿಶೀಲನೆ ನಡೆಸಲಿದ್ದಾರೆಂದು ಎಂಜಿನಿಯರ್ ಕೇಶವ ಮಾಹಿತಿ ನೀಡಿದರು.ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಸದ್ದಾಂ ಹುಸೇನ್ ತಿಳಿಸಿದ್ದಾರೆ.