ಸಿರುಗುಪ್ಪ: ನಗರದಲ್ಲಿರುವ ಸರ್ಕಾರಿ ಬಸ್‌ನಿಲ್ದಾಣ ಮೊಬೈಲ್ ಕಳ್ಳರ ಸ್ವರ್ಗವಾಗಿದ್ದು ಪ್ರತಿನಿತ್ಯವೂ ಬಸ್ ಹತ್ತುವ ಸಮಯದಲ್ಲಿ 2-3 ಪ್ರಯಾಣಿಕರ ಮೊಬೈಲ್ ಕಳ್ಳತನವಾಗುವುದು ಸಾಮಾನ್ಯವಾಗಿರುತ್ತದೆ.
ನಗರದ ಬಸ್‌ನಿಲ್ದಾಣದಿಂದ ಬೀದರ್‌ನಿಂದ ಚಾಮರಾಜ ನಗರದವರೆಗೆ ಮೈಸೂರ್‌ನಿಂದ ವಿಜಯಪುರದವರೆಗೆ ಹೈದ್ರಾಬಾದ್‌ನಿಂದ ಬೆಂಗಳೂರುವರೆಗೆ ಪ್ರತಿನಿತ್ಯವೂ ಈ ಬಸ್ ನಿಲ್ದಾಣದಿಂದ ಸುಮಾರು 4 ಸಾವಿರ ಪ್ರಯಾಣಿಕರು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುತ್ತಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ಸೀಟಿಗಾಗಿ ಅವಸರವಾಗಿ ಬಸ್ ಹತ್ತುವ ಸಮಯದಲ್ಲಿಯೇ ಬೆಲೆ ಬಾಳುವ ಮೊಬೈಲ್ ಗಳು ಕಳ್ಳತನವಾಗುವುದು ಇಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚಾಗಿದೆ. ಕಳೆದ ಒಂದು ವರ್ಷದಿಂದ ಬಸ್ ಹತ್ತುವ ಪ್ರಯಾಣಿಕರ ಸಾವಿರಾರು ಮೊಬೈಲ್ ಗಳು ಕಳ್ಳತನವಾಗುತ್ತಿದ್ದರೂ ಬಸ್ ನಿಲ್ದಾಣದ ಅಧಿಕಾರಿಗಳು ಮಾತ್ರ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೊಬೈಲ್ ಕಳೆದುಕೊಂಡ ಪ್ರಯಾಣಿಕರು ಕಳ್ಳರಿಗೆ ಹಿಡಿ ಶಾಪ ಹಾಕುತ್ತಾರೆಯೇ ಹೊರತು ಪೊಲೀಸ್ ಠಾಣೆಗೆ ದೂರು ನೀಡಿದರೆ ಕಳೆದು ಹೋದ ಮೊಬೈಲ್‌ನ್ನು ಹುಡುಕಿಕೊಡುವುದು ಅಷ್ಟರಲ್ಲಿಯೇ ಇದೆ ಎನ್ನುವ ಅಸಡ್ಡೆಯಿಂದ ಮೊಬೈಲ್ ಕಳೆದುಕೊಂಡ ಬಹುತೇಕರು ಪೊಲೀಸ್ ಠಾಣೆಗೆ ಹೋಗಿ ದೂರನ್ನೇ ನೀಡುತ್ತಿಲ್ಲ. ಇದರಿಂದಾಗಿಯೂ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿರುತ್ತದೆ.
ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಹತ್ತುವ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದರೆ ಮೊಬೈಲ್ ಕಳ್ಳರನ್ನು ಗುರುತಿಸಬಹುದು. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿ.ಸಿ. ಕ್ಯಾಮೆರಾ ಅಳವಡಿಸಲು ಮುಂದಾಗದಿರುವುದು ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರಯಾಣಿಕರಾದ ಎಚ್.ಎಸ್. ಶೇಕಣ್ಣ, ಸಿದ್ದಲಿಂಗ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಮೊಬೈಲ್ ಕಳ್ಳತನ ತಡೆಗಟ್ಟಲು ಪೊಲೀಸ್ ಪಹರೆಯೊಂದಿಗೆ, ಸಿ.ಸಿ.ಕ್ಯಾಮೆರಾವನ್ನು ಅಳವಡಿಸಿದರೆ ಮೊಬೈಲ್ ಕಳ್ಳತನ ಮಾಡುವವರ ಹಾವಳಿಯನ್ನು ನಿಯಂತ್ರಿಸಬಹುದೆಂದು ದಿನನಿತ್ಯವೂ ಈ ಬಸ್‌ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು ಆಗ್ರಹಿಸಿದ್ದಾರೆ.
– ಆರ್. ಬಸವರೆಡ್ಡಿ ಕರೂರು