ಬೆಂಗಳೂರು: ಮೋಜಿನ ಜೀವನಕ್ಕಾಗಿ ಮೊಬೈಲ್ ಅಂಗಡಿಯಲ್ಲಿ ಕಳವು ಮಾಡಿದ್ದ ಮೂವರು ವಿದ್ಯಾರ್ಥಿಗಳು ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಪ್ರಭು(20), ಅಜಯ್(19), ಮೌನೇಶ್(21) ಬಂಧಿತರು. ಆರೋಪಿಗಳಿಂದ 50 ಲಕ್ಷ ರೂ. ಮೌಲ್ಯದ 29 ಐಫೋನ್ ಸೇರಿ ವಿವಿಧ ಕಂಪನಿಗಳ 50 ಮೊಬೈಲ್, 202 ಸ್ಮಾರ್ಟ್ ವಾಚ್, ಹ್ಯಾಂಡಿ ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು, ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಗೂಡ್ಸ್ ವಾಹನ, 1 ಬೈಕ್, ಕೆಲ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು ಸೆ.28ರಂದು ಠಾಣೆ ವ್ಯಾಪ್ತಿಯ ನ್ಯೂಬಿಇಎಲ್ ರಸ್ತೆಯಲ್ಲಿನ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಯ ರೋಲಿಂಗ್ ಶೆಟರ್ ಒಡೆದು ಕಳ್ಳತನ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೂರು ತಿಂಗಳ ಹಿಂದೆಯೇ ಸಂಚು: ಆರೋಪಿಗಳ ಪೈಕಿ ಪ್ರಭು ಬಿಸಿಎ, ಅಜಯ್ ಮತ್ತು ಮೌನೇಶ್ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಪ್ರಭು ಐಷಾರಾಮಿ ಜೀವನಕ್ಕೆ ಸಾಕಷ್ಟು ಹಣ ವ್ಯಯಿಸಿದ್ದಾನೆ. ಮೂರು ತಿಂಗಳ ಹಿಂದೆ ನ್ಯೂಬಿಇಎಲ್ ರಸ್ತೆಯಲ್ಲಿರುವ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಒಂದು ಸ್ಮಾರ್ಟ್ ವಾಚ್ ಖರೀದಿಸಿದ್ದ. ಈ ವೇಳೆ ಅಂಗಡಿಯಲ್ಲಿದ್ದ ವಾಚ್ ಗಳು, ಮೊಬೈಲ್‌ಗಳನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದ. ಬಳಿಕ ಸ್ನೇಹಿತರಾದ ಅಜಯ್, ಮೌನೇಶ್ ಜೊತೆ ಸೆ.28ರಂದು ತಡರಾತ್ರಿ ಅಂಗಡಿ ರೋಲಿಂಗ್ ಶೆಟರ್ ಮುರಿದು ಎಲ್ಲ ವಸ್ತುಗಳನ್ನು ಚೀಲ, ಸೂಟ್ ಕೇಸ್‌ಗಳಲ್ಲಿ ತುಂಬಿಕೊಂಡು ಅಜಯ್ ತಂದಿದ್ದ ತಂದೆಯ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು ಎಂದು ಆಯುಕ್ತ ತಿಳಿಸಿದರು.
ಮಶ್ರೂಮ್ ಗೋಡೌನ್‌ಲ್ಲಿತ್ತು ಕಳವು ವಸ್ತುಗಳು: ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದ ಸಂಜಯನಗರ ಠಾಣಾಧಿಕಾರಿ ಭಾಗ್ಯವತಿ ಜೆ.ಬಂಟಿ ನೇತೃತ್ವದ ತಂಡ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳು, ಗೂಡ್ಸ್ ಆಟೋ ಸಂಚರಿಸಿದ್ದ ಎಲ್ಲ ಮಾರ್ಗದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿತ್ತು. ಈ ವೇಳೆ ಆರೋಪಿಗಳು ಒಂದೆರಡು ಕಡೆ ಸಿಗ್ನಲ್ ಜಂಪ್ ಮಾಡಿದ್ದು, ಸಂಚಾರ ನಿರ್ವಹಣೆ ಕೇಂದ್ರದಲ್ಲಿ ಆಟೋ ನಂಬರ್ ದಾಖಲಾಗಿತ್ತು. ಅದರ ಆಧಾ ರದ ಮೇಲೆ ಮಾಲೀಕರ ಹೆಸರು ಪತ್ತೆಯಾಗಿತ್ತು. ಬಳಿಕ ಗೂಡ್ಸ್ ಆಟೋ ಯಾವೆಲ್ಲ ಮಾರ್ಗದಲ್ಲಿ ಸಂಚರಿಸಿದೆ ಎಂದು ಶೋಧಿಸಿದಾಗ ಎಚ್‌ಎಸ್ ಆರ್ ಲೇಔಟ್‌ನಲ್ಲಿರುವ ಮಶ್ರೂಮ್ ಗೋಡೌನ್ ಮುಂಭಾಗ ನಿಂತಿತ್ತು. ಅದು ಆರೋಪಿ ಅಜಯ್ ತಂದೆಗೆ ಸೇರಿದ ಗೋಡೌನ್ ಎಂಬುದು ಗೊತ್ತಾಗಿದೆ. ಈ ವೇಳೆ ಆಟೋ ಬಳಿ ನಿಂತಿದ್ದ ಅಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಸಂಪೂರ್ಣ ವಿಚಾರ ಬಾಯಿಬಿಟ್ಟಿದ್ದಾನೆ. ಬಳಿಕ ಗೋಡೌನ್‌ನಲ್ಲಿದ್ದ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸಾಲ ತೀರಿಸಲು ಕಳವು: ಆರೋಪಿಗಳ ಪೈಕಿ ಪ್ರಭುನ ಮೋಜಿನ ಜೀವ ನಕ್ಕೆ ಆತನ ಪೋಷಕರು ಹಣ ಕೊಡುತ್ತಿರಲಿಲ್ಲ. ಹೀಗಾಗಿ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿ ದ್ದಾನೆ. ಸಾಲ ತೀರಿಸಲು ಮೊಬೈಲ್ ಅಂಗಡಿ ಯಲ್ಲಿ ಕಳವು ಮಾಡುತ್ತಿದ್ದ. ಅದಕ್ಕೆ ಅಜಯ್, ಮೌನೇಶ್ ಸಹಕಾರ ನೀಡಿದ್ದರು. ಮತ್ತೂಂದೆಡೆ ಆರೋಪಿ ಅಜಯ್ ಗೂಡ್ಸ್ ಆಟೋ ಕೊಂಡೊಯ್ದಿರುವ ವಿಚಾರ ಆತನ ತಂದೆಗೆ ಗೊತ್ತಿಲ್ಲ ಎಂದು ಆಯುಕ್ತರು ಹೇಳಿದರು.
ಪಿಯುಸಿಯಲ್ಲಿ ರ್‍ಯಾಂಕ್: ಆರೋಪಿಗಳ ಪೈಕಿ ಅಜಯ್ ಕಳೆದ ವರ್ಷ ಪಿಯುನಲ್ಲಿ ಶೇ.98 ಅಂಕ ಪಡೆದು, ಪೋಷಕ ರಿಗೆ ಉತ್ತಮ ಹೆಸರು ತಂದಿದ್ದ. ಆದರೆ, ಸ್ನೇಹಿತ ಪ್ರಭುನ ಆಮಿಷಕ್ಕೆ ಬಲಿ ಆಗಿ ಕೃತ್ಯದಲ್ಲಿ ಭಾಗಿ ಆಗಿದ್ದಾನೆ. ವಿಚಾರಣೆ ವೇಳೆ, ಪ್ರಕರಣ ಇಷ್ಟು ತೀವ್ರತೆ ಪಡೆದುಕೊಳ್ಳುತ್ತದೆ ಎಂಬುದು ಗೊತ್ತಿರ ಲಿಲ್ಲ. ತಪ್ಪಾಗಿದೆ ಎಂದು ಕಣ್ಣಿರು ಹಾಕಿದ್ದಾನೆ.