Advertisement

ಮೊಬೈಲ್‌ಗೆ ಒಟಿಪಿ ಬಂದ್ರೆ ಮಾತ್ರ ಆಸ್ತಿ ನೋಂದಣಿ

03:45 PM Feb 09, 2020 | Suhan S |

ನಂಜನಗೂಡು: ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ ಜಾರಿಯಾಗಿರುವುದರಿಂದ ನೋಂದಣಿ ಕಾರ್ಯ ಸಾಕಷ್ಟು ವಿಳಂಬವಾಗುತ್ತಿದೆ. ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ವ್ಯವಸ್ಥೆ ಬಂದಿರುವುದರಿಂದ ಜನರು ಹೈರಾಣಾಗಿದ್ದಾರೆ. ದಿನಕ್ಕೆ 10 ಆಸ್ತಿ ನೋಂದಣಿ ನಡೆದರೇ ಅದೇ ದೊಡ್ಡ ಸಾಧನೆಯಾಗಿದೆ. ಎಷ್ಟರ ಮಟ್ಟಗೆ ಈ ಸಮಸ್ಯೆ ಬಿಗಡಾಯಿಸಿದೆ ಎಂದರೆ “ನೋಂದಣಿ ಕಾರ್ಯಗಳಿಗೆ ಅಶಕ್ತರು, ವೃದ್ಧರು ಒಂದು ವಾರದ ತನಕ ಕಚೇರಿಗೆ ಬರಲೇಬೇಡಿ’ ಎಂದು ನೋಂದಣಾಧಿಕಾರಿ ಮನವಿ ಮಾಡಿದ್ದಾರೆ.

Advertisement

ದಿನಕ್ಕೆ 80 ರಿಂದ 100ವರೆಗೆ ಆಸ್ತಿ ನೋಂದಣಿ ಯಾಗುತ್ತಿದ್ದ ನಂಜನಗೂಡು ಕಾರ್ಯಾಲಯದಲ್ಲಿ ಈ ಹೊಸ ವ್ಯವಸ್ಥೆಯಿಂದ ಕೇವಲ 10 ರಿಂದ 15 ನೋಂದಣೆ ಮಾತ್ರ ನಡೆಯುತ್ತಿದೆ. ಜಿಲ್ಲಾ ಕೇಂದ್ರ ಮೈಸೂರಿನ ನಾಲ್ಕು ನೋಂದಣಿ ಕೇಂದ್ರಗಳಲ್ಲಿ ಮೂರೂ ದಿನಗಳು ಒಂದೇ ಒಂದು ಆಸ್ತಿ ನೋಂದಣೆ ಕೂಡ ಆಗದ ಪರಿಣಾಮ ಜನರು ಹಾಗೂ ಪತ್ರ ಬರಹಗಾರರು ಪರದಾಡುವಂತಾಗಿದೆ.

ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳು ದೃಢೀಕರಣ ಬಳಿಕ ಬಳಿಕ ದಾಖಲೆಗಳ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಒಟಿಪಿಗಾಗಿ ಕಾಯಲಾಗುತ್ತದೆ. ನಂತರ ಸಂಬಂಧಿಸಿದವರ ಮೊಬೈಲ್‌ಗೆ ಒಟಿಪಿ ನಂಬರ್‌ ಬರುತ್ತದೆ. ಈ ಒಟಿಪಿ ನಂಬರನ್ನು ಕಂಪ್ಯೂಟರಿಗೆ ದಾಖಲಿಸಿದ ನಂತರವೇ ನೋಂದಣೆ ಕಾರ್ಯ ಮುಂದುವರಿಯುತ್ತದೆ.

ಖರೀದಿ ಮತ್ತು ಮಾರಾಟಗಾರರ ಒಟಿಪಿಗೆ 20 ಸೆಕೆಂಡ್‌ ಅವಧಿ ನಿಗದಿ ಪಡಿಸಲಾಗಿದ್ದು, ಸಾಕ್ಷಿದಾರರ ಒಟಿಪಿಗೆ ಕೇವಲ 15 ಸೆಕೆಂಡ್‌ ಮಾತ್ರ ನಿಗದಿ ಪಡಿಸಲಾಗಿದೆ. ಇದರಿಂದಾಗಿ ಇಂಟರ್‌ನೆಟ್‌ (ಸರ್ವರ್‌) ಸುಸ್ಥಿಯಲ್ಲಿದ್ದು ಕಾರ್ಯನಿರ್ವಸಿದರೆ ಪ್ರತಿ ಗಂಟೆಗೆ ಒಂದು ನೋಂದಣೆ ಮಾತ್ರ ಸಾಧ್ಯ ಎನ್ನುತ್ತಾರೆ ಇಲ್ಲಿನ ಕಂಪ್ಯೂಟರ್‌ ಆಪರೇಟರ್‌. ನಿಗದಿತ ಅವಧಿಯಲ್ಲಿ ಒಟಿಪಿ ಬಂದಿಲ್ಲ ಎಂದಾದರೆ ಹೊಸದಾಗಿ ಅವರ ಒಟಿಪಿಗೆ ದಾಖಲೆ ಸಲ್ಲಿಸಬೇಕು. ಇದು ಪೂರ್ಣಗೊಳ್ಳದೆ ಬೇರೆಯವರ ಒಟಿಪಿ ಕೂಡ ದಾಖಲಿಸಲಾಗುವುದಿಲ್ಲ. ಹಾಗಾಗಿ ಆಸ್ತಿ ನೋಂದಣಿ ಕಾರ್ಯ ವಿಳಂಬ ಆಗುತ್ತಿದೆ ಎಂದು ಅವರು ತಿಳಿಸಿದರು.

ಹೊಸ ನೀತಿಯಿಂದಾಗಿ ನೋಂದಣಿ ಕಾರ್ಯ ನಿಧಾನವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ನಂಜನಗೂಡು ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನಕ್ಕೆ 40 ನೋಂದಣಿಯನ್ನು ಮಾತ್ರ ದಾಖಲಿಸಿ ಕೊಳ್ಳಲಾಗಿತ್ತು. ಆದರೆ, ಮೂರು ದಿನ ಕಳೆದರೂ 40 ನೋಂದಣಿ ಕಾರ್ಯ ಪೂರ್ಣಗೊಂಡಿಲ್ಲ. ಬುಧವಾರ ನೋಂದಣಿಗೆ ಬಂದಿದ್ದವರು ಶುಕ್ರವಾರ ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸುಸ್ತಾದ ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ. ಏನೇ ಆಗಲಿ ಹೊಸ ಒಟಿಪಿ ವ್ಯವಸ್ಥೆಯನ್ನು ಸುಧಾರಣಾ ಕ್ರಮಗಳ ಮೂಲಕ ನೋಂದಣಿ ಕಾರ್ಯವನ್ನ ತ್ವರಿತವಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಪತ್ರಬರಹಗಾರರ ಆದಾಯಕ್ಕೆ ಕತ್ತರಿ: ಪತ್ರಬರಹಗಾರರು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ದಿನಕ್ಕೆ ಕನಿಷ್ಠ 5 ನೋಂದಣಿ ಮಾಡಿಸುತ್ತಿದ್ದರು. ಈಗ ಅವರ ಆದಾಯಕ್ಕೆ ಕತ್ತರಿ ಬಿದ್ದಿದೆ. ಹೀಗಾದರೆ ನಾವು ಸಹಾಯಕರು, ಕಾರ್ಯಾಲಯದ ಬಾಡಿಗೆ ನಿಭಾಯಿಸುವುದು ಹೇಗೆ ಎಂದವರು ಇಲ್ಲಿನ ಪತ್ರ ಬರಹಗಾರರಾದ ಅರಸು ಅಳಲು ತೋಡಿಕೊಂಡರು.

 ನಕಲಿ ನೋಂದಣಿಗೆ ಕಡಿವಾಣ :  ಆಸ್ತಿ ನೋಂದಣಿಗೆ ಹೊಸ ಒಟಿಪಿ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಪ್ರಾರಂಭದಲ್ಲಿ ಜನರು ಪರದಾಡುವಂತಾದರೂ ನಕಲಿ ನೋಂದಣಿಗೆ ಕಡಿವಾಣ ಬೀಳಲಿದೆ. ಆಸ್ತಿ ಮಾರಾಟ ಹಾಗೂ ಖರೀದಿಗೆ ತಮಗೆ ಬೇಕಾದವರನ್ನು ಕರೆದುಕೊಂಡು ಬಂದು ಸಾಕ್ಷಿ ಹಾಕಿಸುವಂತಿಲ್ಲ. ಇದೀಗ ಯಾರು ಬೇಕೋ ಅವರು ಸಾಕ್ಷಿ ಹಾಕುವಂತಿಲ್ಲ. ಸಾಕ್ಷಿಯಾಗಿ ಋಜು ಮಾಡಿದವರ ಎಲ್ಲಾ ವಿವರಗಳು ಇಲ್ಲಿ ದಾಖಲಾಗುವುದರಿಂದ ಅವರು ಮೊದಲಿನ ಹಾಗೆ ಜಾರಿಕೊಳ್ಳಲೂ ಸಾಧ್ಯವಿಲ್ಲ. ಒಟ್ಟಾರೆ ಈ ವ್ಯವಸ್ಥೆಯಿಂದ ನಕಲಿ ದುಷ್ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಎನ್ನಲಾಗುತ್ತಿದೆ.

ಅಶಕ್ತರು, ವೃದ್ಧರು ವಾರದ ಬಳಿಕ ಬನ್ನಿ :  ಒಟಿಪಿ ವ್ಯವಸ್ಥೆಯಿಂದ ಆಸ್ತಿ ನೋಂದಣಿ ಕಾರ್ಯ ಸಾಕಷ್ಟು ವಿಳಂಬ ಆಗುತ್ತಿದೆ. ಹೀಗಾಗಿ ಒಂದು ವಾರದ ತನಕ ಅಶಕ್ತರು ಹಾಗೂ ವೃದ್ಧರು ನೋಂದಣಾಧಿಕಾರಿಗಳ ಕಚೇರಿಗೆ ಬಂದು ದಿನಗಟಗಟ್ಟಲೆ ಕಾಯುವುದು ಬೇಡ. ವಾರದ ನಂತರ ಬನ್ನಿ ಎಂದು ನಂಜನಗೂಡು ನೋಂದಣಾಧಿಕಾರಿ ನಂದಿನಿ ಮನವಿ ಮಾಡಿದ್ದಾರೆ.

ಆಸ್ತಿ ನೋಂದಣಿಗೆ ಒಟಿಪಿ ವ್ಯವಸ್ಥೆ ಹೇಗೆ? : ನೂತನ ಒಟಿಪಿ ವ್ಯವಸ್ಥೆಯ ಪ್ರಕಾರ, ಆಸ್ತಿ ನೋಂದಣಿಗೆ ಮಾರಾಟಗಾರರು, ಖರೀದಿದಾರರು ಹಾಗೂ ಸಾಕ್ಷಿಗಳು ಬಂದು ನೋಂದಣಾಧಿಕಾರಿಗಳ ಎದುರು ತಮ್ಮ ಆಧಾರ್‌ ಕಾರ್ಡ್‌ ಸೇರಿದಂತೆ ದಾಖಲಾತಿಗಳನ್ನು ಸಲ್ಲಿಸಿದ ನಂತರ ಋಜು ಮಾಡಿದ ಮೇಲೆ ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಒಟಿಪಿಗಾಗಿ ಕಾಯಲಾಗುತ್ತದೆ. ನಂತರ ಸಂಬಂಧಿಸಿದವರ ಮೊಬೈಲ್‌ ಫೋನ್‌ಗೆ ಒಟಿಪಿ ನಂಬರ್‌ ಬರುತ್ತದೆ. ಈ ಒಟಿಪಿ ನಂಬರನ್ನು ಕಂಪ್ಯೂಟರಿಗೆ ದಾಖಲಿಸಿದ ನಂತರವೇ ನೋಂದಣೆ ಕಾರ್ಯ ಮುಂದುವರಿಯುತ್ತದೆ. ನಿಗದಿತ ಅವಧಿಯಲ್ಲಿ ಒಟಿಪಿ ಬಂದಿಲ್ಲ ಎಂದಾದರೆ ಹೊಸದಾಗಿ ಅವರ ಒಟಿಪಿಗೆ ದಾಖಲೆ ಸಲ್ಲಿಸಬೇಕು. ಇದು ಪೂರ್ಣಗೊಳ್ಳದೆ ಬೇರೆಯವರ ಒಟಿಪಿ ಕೂಡ ದಾಖಲಿಸಲಾಗುವುದಿಲ್ಲ.

 

ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next