ಬೆಂಗಳೂರು: ಕೇಂದ್ರ ಸರ್ಕಾರದ “ಡಿಜಿಟಲ್ ಇಂಡಿಯಾ’ ಅನುಷ್ಠಾನಕ್ಕೆ ನಾಂದಿ, ದೇಶದಲ್ಲೇ ಪ್ರಥಮ, ಐಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಮುಕುಟ, ಅಂಗೈಯಲ್ಲಿ ಮಾಹಿತಿ; ಬೆರಳಂಚಿನಲ್ಲಿ ಸರ್ಕಾರದ ಸೇವೆ’ ಎಂದೆಲ್ಲ ಹೇಳಿಕೊಂಡು ಜಾರಿಗೆ ತರಲಾಗಿದ್ದ ಮತ್ತು ವಿಶ್ವದ ಅತ್ಯುತ್ತಮ ಮೊಬೈಲ್ ಸರ್ಕಾರಿ ಸೇವೆ ಎಂದು ದುಬೈನಲ್ಲಿ ಚಿನ್ನದ ಪದಕ ಪಡೆದಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಕರ್ನಾಟಕ ಮೊಬೈಲ್ ಒನ್’ ಯೋಜನೆ ಸದ್ಯ “ಸೈಲೆಂಟ್ ಮೋಡ್’ನಲ್ಲಿದೆ.
ನಾಗರಿಕ ಸೇವೆಗಳನ್ನು ಮೊಬೈಲ್ ಆ್ಯಪ್ ಮೂಲಕ ಒದಗಿಸುವ ಕರ್ನಾಟಕ ಮೊಬೈಲ್ ಒನ್ ಯೋಜನೆ ಆರಂಭವಾಗಿ ಎರಡು ವರ್ಷ ಕಳೆದಿದೆ. ವಿಪರ್ಯಾಸ ಎಂದರೆ ಇದರ ಬಳಕೆದಾರರು ಶೇ.0.4ರಷ್ಟು ಮಾತ್ರ. ಶೇ. 60ಕ್ಕೂ ಹೆಚ್ಚು ಜನರಿಗೆ ಇಂತಹದೊಂದು ಬಹುಪಯೋಗಿ ಯೋಜನೆ ಇದೆ ಅನ್ನುವುದೇ ಗೊತ್ತಿಲ್ಲ. ಇದು ಯಾವುದೇ ಖಾಸಗಿ ಸಂಸ್ಥೆ ತನ್ನಷ್ಟಕ್ಕೇ ತಾನೇ ಸಮೀಕ್ಷೆ ನಡೆಸಿ ಹೇಳಿದ್ದಲ್ಲ, ಸ್ವತಃ ಇ-ಆಡಳಿತ ಇಲಾಖೆ ಹಾಗೂ ಸರ್ಕಾರದ ಯೋಜನೆಗಳ ಮೌಲ್ಯಮಾಪನ ಮಾಡುವ ಅಧಿಕೃತ ಸಂಸ್ಥೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ಬಹಿರಂಗಗೊಂಡ ಅಂಶಗಳು.
ರಾಜ್ಯ ಸರ್ಕಾರ 2014ರ ಡಿಸೆಂಬರ್‌ನಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದಕ್ಕೆ ಚಾಲನೆ ನೀಡಿ, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಕರ್ನಾಟಕ ಸಾಕಾರಗೊಳಿಸಿದೆ ಎಂದಿದ್ದರು. ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರದ ಈ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಮೊಬೈಲ್ ಆಡಳಿತ ಬಗ್ಗೆ ಮಾತನಾಡಿದ್ದಾರೆ, ಆದರೆ, ನಾವು ಅದನ್ನು ಅನುಷ್ಠಾನಕ್ಕೆ ತಂದು ಮುಂಚೂಣಿಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಆದರೆ, ಎರಡು ವರ್ಷದ ಬಳಿಕ ಸಮೀಕ್ಷಾ ವರದಿ ಗಮನಿಸಿದರೆ “ಬರೀ ಹೇಳಿದ್ದಷ್ಟೇ, ಆಗಿದ್ದು ಏನೂ ಇಲ್ಲ’ ಅನ್ನುವುದು ಸ್ಪಷ್ಟವಾಗುತ್ತದೆ.ಸಮೀಕ್ಷಾ ವರದಿ ಹೇಳುವಂತೆ ರಾಜ್ಯದಲ್ಲಿ ಸದ್ಯ ಅಂದಾಜು 6.60 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ 6.57 ಕೋಟಿ ಮೊಬೈಲ್ ಬಳಕೆದಾರರು ಇದ್ದಾರೆ. ಅಂದರೆ, ಒಟ್ಟು ಜನಸಂಖ್ಯೆಯ ಶೇ.95ರಷ್ಟು ಮಂದಿ ಮೊಬೈಲ್ ಹೊಂದಿದ್ದಾರೆ. ಅಂದರೆ ಪ್ರತಿ 100 ಜನರಲ್ಲಿ 99 ಜನ ಮೊಬೈಲ್ ಇಟ್ಟುಕೊಂಡಿದ್ದಾರೆ. ಆದರೆ, ಇದರಲ್ಲಿ ಕರ್ನಾಟಕ ಮೊಬೈಲ್ ಒನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡವರು ಬರೀ 2.53 ಲಕ್ಷ ಮೊಬೈಲ್ ಬಳಕೆದಾರರು ಮಾತ್ರ. ಅಂದರೆ ಶೇ.0.4ರಷ್ಟು ಮಾತ್ರ ಜನ ಈ ಯೋಜನೆಗೆ ನೋಂದಣಿ ಆಗಿದ್ದಾರೆ. ಪ್ರತಿ 250 ಮೊಬೈಲ್ ಬಳಕೆದಾರರಲ್ಲಿ ಒಬ್ಬರು ಮಾತ್ರ ಕರ್ನಾಟಕ ಮೊಬೈಲ್ ಒನ್ ಯೋಜನೆಯ ಬಳಕೆದಾರರು ಆಗಿದ್ದಾರೆ. ಈ ಯೋಜನೆಯ ಬಗ್ಗೆ ಮಾಹಿತಿ ಇರುವುದು ಕೇವಲ ಶೇ.33ರಷ್ಟು ಮಂದಿಗೆ ಮಾತ್ರ ಗೊತ್ತಿದ್ದು, ಶೇ.60ಕ್ಕೂ ಹೆಚ್ಚು ಜನರಿಗೆ ಇಂತದೊಂದು ಯೋಜನೆ ಇದೇ ಅನ್ನುವುದೇ ತಿಳಿದಿಲ್ಲ.
ಬರೀ 658 ಸೇವೆಗಳು ಮಾತ್ರ: ಯೋಜನೆ ಜಾರಿಗೆ ತಂದಾಗ ಸರ್ಕಾರದ ಇಲಾಖೆಗಳ 178, ಜಿ2ಸಿ (ಸರ್ಕಾರದಿಂದ ಗ್ರಾಹಕರಿಗೆ) 480, ಹಾಗೂ ಬಿ2ಸಿ (ವಾಣಿಜ್ಯದಿಂದ ಗ್ರಾಹಕರಿಗೆ) 3,644 ಸೇವೆಗಳು ಸೇರಿ ಒಟ್ಟು 4,302 ಸೇವೆಗಳನ್ನು ನೀಡಲಾಗುವುದು, ಶೀಘ್ರದಲ್ಲೇ ಇದಕ್ಕೆ ಇನ್ನೂ 4 ಸಾವಿರ ಸೇವೆಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಇಂದು ಮೂರು ವರ್ಗಗಳಲ್ಲಿ ಸೇರಿ ಕೇವಲ 658 ಸೇವೆಗಳು ಮಾತ್ರ ಚಾಲ್ತಿಯಲ್ಲಿವೆ. ಇದರಲ್ಲಿ 400ಕ್ಕೂ ಹೆಚ್ಚು ಸೇವೆಗಳು ಈಗಾಗಲೇ ಸಕಾಲದಡಿ ಜಾರಿಯಲ್ಲಿವೆ. ಇದಕ್ಕೆ ಪ್ರಚಾರ ಮತ್ತು ಜಾಗೃತಿಯ ಕೊರತೆ ಕಾರಣ ಎಂದು ಸಮೀಕ್ಷಾ ವರದಿ ಹೇಳಿದೆ.
ಸಮೀಕ್ಷೆ ನಡೆಸಿದ್ದು ಹೇಗೆ?
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಇ-ಆಡಳಿತ ಇಲಾಖೆಯ ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಖಾಸಗಿ ಸಂಸ್ಥೆಯ ಮೂಲಕ ಈ ಸಮೀಕ್ಷೆ ನಡೆಸಿದೆ. ನಿರ್ದಿಷ್ಟ ಪ್ರಶ್ನಾವಳಿ ಸಿದ್ಧಪಡಿಸಿ ಪ್ರತ್ಯೇಕ ತಂಡಗಳನ್ನು ರಚಿಸಿ ನೇರ ಭೇಟಿ ಮತ್ತು ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಕಂದಾಯ ವಿಭಾಗಗಳ ಜೊತೆಗೆ ಬೆಂಗಳೂರು ನಗರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಲ್ಲ ಭಾಗಗಳಲ್ಲಿ ಒಟ್ಟು 2 ಸಾವಿರ ಮಂದಿಯ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇದು ಅತ್ಯಂತ ವಸ್ತುನಿಷ್ಠ ಹಾಗೂ ವಾಸ್ತವಕ್ಕೆ ತೀರಾ ಹತ್ತಿರವಾದ ಸಮೀಕ್ಷೆ ಆಗಿದೆ. ಸಮೀಕ್ಷಾ ವರದಿಯ ಜೊತೆಗೆ ಕೆಲವೊಂದು ಶಿಫಾರಸುಗಳನ್ನು ಸಹ ನೀಡಲಾಗಿದೆ. ಮುಂದೆ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
– ರಫೀಕ್ ಅಹ್ಮದ್