Advertisement

ಎಲ್ಲೆಡೆ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸಲು ಕ್ರಮ

01:30 PM Jul 22, 2020 | Suhan S |

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಉಳಿದಿರುವ ಟವರ್‌ ನಿರ್ಮಾಣ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.

Advertisement

ಮಂಗಳವಾರ ಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಕರೆಯಲಾಗಿದ್ದ ಮೊಬೈಲ್‌ ನೆಟ್‌ವರ್ಕ್‌ ಆಪರೇಟರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 241 ಬಿಎಸ್‌ಎನ್‌ಎಲ್‌ ಟವರ್‌ಗಳಿದ್ದು, ಖಾಸಗಿ ಸಂಸ್ಥೆಗಳ ಜತೆ 37 ಟವರ್‌ಗಳನ್ನು ಹಂಚಿಕೊಳ್ಳಲಾಗಿದೆ. ಬಿಎಸ್‌ಎನ್‌ ಎಲ್‌ ಟವರ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಫ್ರೀಕ್ವೆನ್ಸಿ ಉತ್ತಮಪಡಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ ಸಂಪರ್ಕ ಜಾಲವನ್ನು ಉತ್ತಮಪಡಿಸಲು ಅಗತ್ಯವಿರುವ ನೆರವನ್ನು ಒದಗಿಸುವ ಕುರಿತು ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಹಲವಾರು ಮಂದಿ ವರ್ಕ್‌ ಫ್ರಮ್‌ ಹೋಂ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಕಡೆಗಳಿಂದ ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಪರ್ಕ ಜಾಲ ಉತ್ತಮಪಡಿಸಿ ಗುಣಮಟ್ಟದ ಸೇವೆಯನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಕಡೆಗಳಲ್ಲಿ ಟವರ್‌ಗಳನ್ನು ಸ್ಥಾಪಿಸುವ ಕುರಿತಾದ ಸಾಧ್ಯತೆಗಳನ್ನು ಪರಿಶೀಲಿಸಲು ಖಾಸಗಿ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಯೋ ಸಂಸ್ಥೆ ಅಂತಹ 22 ಕಡೆಗಳಲ್ಲಿ ಟವರ್‌ ನಿರ್ಮಿಸುವುದು ಬಾಕಿಯಿದ್ದು, ಏರ್‌ಟೆಲ್‌ 42 ಕಡೆಗಳಲ್ಲಿ ಟವರ್‌ ನಿರ್ಮಿಸಬೇಕಾಗಿದೆ. ಈ ಸಂಸ್ಥೆಗಳಿಗೆ ಟವರ್‌ ನಿರ್ಮಾಣಕ್ಕೆ ಸ್ಥಳ ಒದಗಿಸಲು ಇವರು ಅಡೆತಡೆಗಳನ್ನು ಜಿಲ್ಲಾಧಿಕಾರಿಗಳು ಬಗೆಹರಿಸಲಿದ್ದು, ಆದಷ್ಟು ಬೇಗನೇ ಟವರ್‌ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್‌. ಅರುಣ್‌, ವಿವಿಧ ಇಲಾಖಾ ಅಧಿಕಾರಿಗಳು, ಬಿಎಸ್‌ಎನ್‌ಎಲ್‌, ಜಿಯೋ ಮತ್ತು ಏರ್‌ ಟೆಲ್‌ ಸಂಸ್ಥೆ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next