Advertisement

ಮೊಬೈಲ್‌ ಮಾರ್ಕೆಟ್‌ ಬೂಮ್‌! ಸ್ಮಾರ್ಟ್‌ ಫೋನ್‌ ಖರೀದಿಯಲ್ಲಿ ದಾಖಲೆ

11:13 PM Dec 01, 2019 | Sriram |

ಭಾರತದಲ್ಲಿ ಆರ್ಥಿಕತೆ ಮಂದಗತಿಯಲ್ಲಿದೆ ಎಂಬ ಈ ಸನ್ನಿವೇಶದಲ್ಲಿ ಸ್ಮಾರ್ಟ್‌ ಫೋನ್‌ ಮಾರುಕಟ್ಟೆ ಮಾತ್ರ ನಾಗಾಲೋಟದಿಂದ ಸಾಗಿದೆ! ಈ ವರ್ಷದ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ತೈಮಾಸಿಕದಲ್ಲಿ ಹಿಂದೆಂದಿಗಿಂತ ಅಧಿಕ ಸ್ಮಾರ್ಟ್‌ ಫೋನ್‌ಗಳು ಭಾರತದಲ್ಲಿ ಮಾರಾಟವಾಗಿವೆ! ಈ ಮೂರು ತಿಂಗಳ ಅವಧಿಯಲ್ಲಿ ಮಾರಾಟವಾಗಿರುವ ಮೊಬೈಲ್‌ ಫೋನ್‌ಗಳ ಸಂಖ್ಯೆ 46.6 ಮಿಲಿಯನ್‌ (ದಶಲಕ್ಷ)! ಅಂದರೆ 4.66 ಕೋಟಿ ಸ್ಮಾರ್ಟ್‌ ಫೋನ್‌ಗಳನ್ನು ಭಾರತೀಯರು ಈ 3 ತಿಂಗಳಲ್ಲಿ ಖರೀದಿಸಿದ್ದಾರೆ! ಇದು ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಮಾರಾಟವಾಗಿದ್ದ ಸ್ಮಾರ್ಟ್‌ ಫೋನ್‌ಗಿಂತ ಶೇ. 9.3 ರಷ್ಟು ಹೆಚ್ಚಿದೆ.

Advertisement

ಐಡಿಸಿ ಸಂಸ್ಥೆ (ಇಂಟರ್‌ನ್ಯಾಷನಲ್‌ ಡಾಟಾ ಸೆಂಟರ್‌) ಬಿಡುಗಡೆ ಮಾಡಿರುವ ವರದಿಯಲ್ಲಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಏರುಗತಿಯಲ್ಲಿ ಸಾಗಿರುವುದನ್ನು ಉಲ್ಲೇಖೀಸಲಾಗಿದೆ. ಈ ಅಧಿಕ ಮಾರಾಟಕ್ಕೆ ಪ್ರಮುಖ ಕಾರಣ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಬ್ಬಗಳ ಪ್ರಯುಕ್ತ ನೀಡಲಾದ ರಿಯಾಯಿತಿಗಳು ಎಂಬುದನ್ನು ತಿಳಿಸಲಾಗಿದೆ. ಅಂಗಡಿಯೇತರ ಮಾರಾಟ ಹೊರತುಪಡಿಸಿ, ಆನ್‌ಲೈನ್‌ (ಅಮೆಜಾನ್‌, ಫ್ಲಿಪಾRರ್ಟ್‌ ಇತ್ಯಾದಿ) ಮೂಲಕವೇ ಶೇ. 45.5ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಾಗಿದೆ.

ನಂ. 1 ಸ್ಥಾನ ಕಾಯ್ದುಕೊಂಡ ಶಿಯೋಮಿ
ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನದ ಶಿಯೋಮಿ ಕಂಪೆನಿ ತನ್ನ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ. ಶೇ. 27.1ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ತ್ತೈಮಾಸಿಕದಲ್ಲಿ ಅದು ಕಳೆದ ಅವಧಿಗಿಂತ ಶೇ. 8.5ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಶಿಯೋಮಿ ಈ ತ್ತೈಮಾಸಿಕದಲ್ಲಿ 12.6 ದಶಲಕ್ಷ (1.26 ಕೋಟಿ) ಫೋನ್‌ಗಳನ್ನು ಮಾರಾಟ ಮಾಡಿದೆ. ಇನ್ನು, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಕಂಪೆನಿ ಎರಡನೇ ಸ್ಥಾನದಲ್ಲಿದ್ದು, ಶೇ. 18.9ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಅದು 88 ಲಕ್ಷ ಫೋನ್‌ಗಳನ್ನು ಈ ತ್ತೈಮಾಸಿಕದಲ್ಲಿ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಯಾಮ್ಸಂಗ್‌ 96 ಲಕ್ಷ ಫೋನ್‌ಗಳನ್ನು ಮಾರಿತ್ತು.

ಮೂರನೇ ಸ್ಥಾನದಲ್ಲಿ ಚೀನಾದ ವಿವೋ ಕಂಪೆನಿಯಿದ್ದು, ಜುಲೈಯಿಂದ ಸೆಪ್ಟೆಂಬವರ್‌ರೆಗಿನ ತ್ತೈಮಾಸಿಕದಲ್ಲಿ 71 ಲಕ್ಷ ಫೋನ್‌ಗಳನ್ನು ಬಿಕರಿ ಮಾಡಿದೆ. ಅದರ ಮಾರುಕಟ್ಟೆ ಪಾಲು ಶೇ. 15.2 ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿವೋ 45 ಲಕ್ಷ ಫೋನ್‌ಗಳನ್ನು ಮಾರಿತ್ತು. ಈ ವರ್ಷ ಅದರ ಬೆಳವಣಿಗೆ ನಾಗಾಲೋಟದಿಂದ ಸಾಗಿದ್ದು, ಶೇ. 58.7ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ತ್ತೈಮಾಸಿಕದಲ್ಲಿ ಅದರ ಮಾರುಕಟ್ಟೆ ಪಾಲು ಶೇ. 10.5ರಷ್ಟಿತ್ತು.

ಅತಿ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡ ರಿಯಲ್‌ ಮಿ ಕಂಪೆನಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಟಾಪ್‌ 5ರಲ್ಲಿರುವುದು ವಿಶೇಷ. ಈ ತ್ತೈಮಾಸಿಕದಲ್ಲಿ ಅದು 67 ಲಕ್ಷ ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಅದರ ಮಾರುಕಟ್ಟೆ ಪಾಲು ಶೇ. 14.3. 2018ರ ಇದೇ ತ್ತೈಮಾಸಿಕದಲ್ಲಿ ಅದು ಭಾರತದಲ್ಲಿ ಕೇವಲ 13 ಲಕ್ಷ ಫೋನ್‌ಳನ್ನು ಮಾರಿತ್ತು. ವಿವೋ ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ ಶೇ. 401ರಷ್ಟು ಬೆಳವಣಿಗೆ ದಾಖಲಿಸಿರುವುದು ವಿಶೇಷ. ಐದನೇ ಸ್ಥಾನ ಗಳಿಸಿರುವ ಒಪ್ಪೋ 55 ಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಅದರ ಮಾರುಕಟ್ಟೆ ಪಾಲು ಶೇ. 11.8. ಕಳೆದ ವರ್ಷ ಇದೇ ಅವಧಿಯಲ್ಲಿ 29 ಲಕ್ಷ ಫೋನ್‌ಗಳನ್ನು ಒಪ್ಪೋ ಮಾರಾಟ ಮಾಡಿತ್ತು. ಕಳೆದ ಅವಧಿಗಿಂತ ಶೇ. 92.3ರಷ್ಟು ಬೆಳವಣಿಗೆಯನ್ನು ಕಂಪೆನಿ ದಾಖಲಿಸಿದೆ. ಇನ್ನುಳಿದ ಕಂಪೆನಿಗಳು ಭಾರತದಲ್ಲಿ 59 ಲಕ್ಷ ಫೋನ್‌ಗಳನ್ನು ಮಾರಾಟ ಮಾಡಿ ಶೇ. 12.7 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.

Advertisement

ಒಂದೇ ಒಡೆತನದ ಕಂಪೆನಿಗಳು!
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಿಯೋಮಿ, ಸ್ಯಾಮ್ಸಂಗ್‌ ಹೊರತುಪಡಿಸಿ ಐದನೇ ರ್‍ಯಾಂಕಿಂಗ್‌ ಒಳಗೆ ಇರುವ ವಿವೋ, ಒಪ್ಪೋ, ರಿಯಲ್‌ ಮಿ ಕಂಪೆನಿಗಳ ಒಡೆತನ ಒಂದೇ ಕಂಪೆನಿಯದ್ದು! ಮೂರೂ ಕಂಪೆನಿಗಳ ಮಾಲೀಕತ್ವವನ್ನು ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಎಂಬ ಕಂಪೆನಿ ಹೊಂದಿದೆ. ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಶಿಯೋಮಿ ಶೇ. 27.1ರಷ್ಟು ಹಾಗೂ ಎರಡನೇ ಸ್ಥಾನದಲ್ಲಿರುವ ಸ್ಯಾಮ್ಸಂಗ್‌ ಶೇ. 18.9ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ನಿಜ. ಆದರೆ ವಿವೋ, ಒಪ್ಪೋ, ರಿಯಲ್‌ ಮಿ ಮಾರುಕಟ್ಟೆ ಪಾಲನ್ನು ಒಟ್ಟು ಕೂಡಿದರೆ, ಬಿಬಿಕೆ ಎಲೆಕ್ಟ್ರಾನಿಕ್ಸ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮೂರೂ ಬ್ರಾಂಡ್‌ಗಳ ಮಾರುಕಟ್ಟೆ ಪಾಲನ್ನು ಕೂಡಿದರೆ ಶೇ. 41.3ರಷ್ಟಾಗುತ್ತದೆ. ಅಲ್ಲಿಗೆ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಪಾಲನ್ನು ಚೀನದ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಹೊಂದಿದೆ! ಇನ್ನೊಂದು ಪ್ರಮುಖ ಅಂಶವೆಂದರೆ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಪ್ರಮುಖ ಕಂಪೆನಿಯಾದ ಒನ್‌ ಪ್ಲಸ್‌ ಕಂಪೆನಿಯ ಒಡೆತನ ಸಹ ಬಿಬಿಕೆ ಎಲೆಕ್ಟ್ರಾನಿಕ್ಸ್‌ನದ್ದೇ!

   - ಕೆ. ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next