Advertisement

ಮೊಬೈಲ್‌ ಮಾಯೆ; ಕೋಸ್ಟಲ್‌ವುಡ್‌ಗೆ ಗಾಯ!

12:42 PM Aug 16, 2018 | Team Udayavani |

ಬೆಳ್ತಂಗಡಿಯ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದ ‘ಪತ್ತೀಸ್‌ ಗ್ಯಾಂಗ್‌’ ತುಳು ಸಿನೆಮಾವನ್ನು ಮೊಬೈಲ್‌ನಲ್ಲಿಯೇ ರೆಕಾರ್ಡ್‌ ಮಾಡಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿದ್ದ ಘಟನೆಗೆ ಸಂಬಂಧಿಸಿ ಆತನನ್ನು ಚಿತ್ರತಂಡವೇ ಹಿಡಿದು ಪೊಲೀಸರಿಗೊಪ್ಪಿಸಿದೆ!

Advertisement

ಹೇಳಲು ಇದೊಂದು ಸಣ್ಣ ವಿಷಯವಾದರೂ ಕೋಸ್ಟಲ್‌ವುಡ್‌ ಅಂಗಳದಲ್ಲಿ ಇಂತಹುದೊಂದು ಅಪಾಯಕಾರಿ ಸನ್ನಿವೇಶ ಮತ್ತೆ ಮತ್ತೆ ಎದುರಾಗುತ್ತಲೇ ಇರುವುದು ಆತಂಕಕಾರಿ ಎಂಬುದನ್ನು ಸೂಚಿಸುತ್ತಿದೆ. ನಿಗದಿತ ಚೌಕಟ್ಟಿನಲ್ಲಿ ಮಾತ್ರ ತೆರೆಕಂಡು ‘ಲಾಭ’ ಎಂಬುದು ಮರೀಚಿಕೆಯಾಗುತ್ತಿರುವ ಕೋಸ್ಟಲ್‌ವುಡ್‌ನ‌ಲ್ಲಿ ತನ್ನ ಸಿನೆಮಾಗಳು ಮೊಬೈಲ್‌ ಮೂಲಕ ಎಲ್ಲೆಂದರಲ್ಲಿ ಹರಿದಾಡುವಂತಾದರೆ ಚಿತ್ರತಂಡದ ಗತಿಯೇನು ಎಂಬ ಪ್ರಶ್ನೆ ಈಗ ಕಾಡಲಾರಂಭಿಸಿದೆ.

ಕಷ್ಟಪಟ್ಟು ತುಳು ಸಿನೆಮಾ ಮಾಡಿದರೆ ಅದನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟು ಸಿನೆಮಾವನ್ನೇ ಹೊಸಕಿ ಹಾಕುವ ಪ್ರಯತ್ನ ಇತ್ತೀಚೆಗೆ ಸ್ವಲ್ಪ ಜಾಸ್ತಿ ನಡೆಯುತ್ತಿದೆ. ಅದರಲ್ಲೂ ನಿಗದಿತ ಬೌಂಡರಿಯೊಳಗೆ ಮಾತ್ರ ತೆರೆಕಾಣುವ ಲಕ್ಷಾಂತರ ರೂ. ಖರ್ಚು ಮಾಡಿದ ತುಳು ಸಿನೆಮಾಗಳು ಎಲ್ಲೆಂದರಲ್ಲಿ ಮೊಬೈಲ್‌ನಲ್ಲಿ ಸಿಗುವಂತಾದರೆ ಮುಂದೆ ತುಳು ಚಲನಚಿತ್ರ ಕ್ಷೇತ್ರದ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ
ಎದುರಾಗಿದೆ.

ಒಂದೊಮ್ಮೆ ಕನ್ನಡ ಸಿನೆಮಾಗಳು ಪೈರಸಿ ಆಯಿತು ಎಂಬ ದೊಡ್ಡ ಮಟ್ಟದ ಸುದ್ದಿ ಆಗುತ್ತಿತ್ತು. ಬಳಿಕ ಒಂದಿಷ್ಟು ಕಡಿವಾಣಗಳು ಬಂದ ಅನಂತರ ನಿಯಂತ್ರಣಕ್ಕೆ ಬಂತು. ಆದರೂ ಪೂರ್ಣ ಮಟ್ಟದಲ್ಲಿ ಅಲ್ಲ. ಆದರೆ ಈ ಪಿಡುಗು ತುಳುವಿಗೂ ಬರುವಂತಾಯಿತು. ‘ದಬಕ್‌ ದಬಾ ಐಸಾ’ ಚಿತ್ರವಂತು ಬಿಡುಗಡೆಯ ಮುನ್ನವೇ ಪೂರ್ಣ ಪ್ರಮಾಣದಲ್ಲಿ ಲೀಕ್‌ ಆಗುವ ಮೂಲಕ ಕೋಸ್ಟಲ್‌ ವುಡ್‌ನ‌ಲ್ಲಿ ಸಂಚಲನ ಸೃಷ್ಟಿಸಿತ್ತು.  ಈ ಮೂಲಕ ತುಳು ಸಿನೆಮಾ ರಂಗವೂ ಅಪಾಯದಲ್ಲಿದೆ ಎಂಬ ಸೂಚನೆ ದೊರೆತಿತ್ತು. ಆ ಬಳಿಕ ಬಂದ ತುಳುವಿನ ಕೆಲವು ಸಿನೆಮಾಗಳು ಇದೇ ರೀತಿಯ ಅನುಭವವನ್ನು ಪಡೆಯುವಂತಾಯಿತು.

ಬಿಡುಗಡೆಗೂ ಮುನ್ನವೇ ಮೊಬೈಲ್‌ನಲ್ಲಿ ತುಳು ಸಿನೆಮಾ ಸಿಗುವುದು ಒಂದೆಡೆಯಾದರೆ, ಬಿಡುಗಡೆಯಾದ ಬಳಿಕ ಅದರ ತುಣುಕುಗಳು ಮೊಬೈಲ್‌ನಲ್ಲಿ ಸಿಗುವ ಸಂದರ್ಭ ಎದುರಾಯಿತು. ಇದರಲ್ಲಿ ಕೆಲವು ಸಿನೆಮಾದ ತುಣುಕುಗಳು ದೀರ್ಘ‌ ಅವಧಿಯಲ್ಲಿದ್ದ ಕಾರಣದಿಂದ ಸಿನೆಮಾ ನೋಡಲು ಹಲವರು ಥಿಯೇಟರ್‌ಗೆ ಹೋಗಲು ನಿರಾಕರಿಸಿದರು. ಇದು ಸಹಜ ಕೂಡ. ಮೊಬೈಲ್‌ನಲ್ಲಿ ಫುಲ್‌ ಸಿನೆಮಾ ಸಿಗುವುದಾದರೆ ಟಾಕೀಸ್‌ಗೆ ಯಾಕೆ ಹೋಗಬೇಕು? ಆದರೆ, ಚಿತ್ರತಂಡವನ್ನು ಮನಸ್ಸಿನಲ್ಲಿಟ್ಟು ನೋಡುವುದಾದರೆ ಮೊಬೈಲ್‌ ಮಾಯೆ ಅವರ ಚಿತ್ರ ಜೀವನವನ್ನೇ ಮಸುಕು ಮಾಡುವುದಂತು ಸತ್ಯ.

Advertisement

ಯಾವುದಾದರೂ ಒಂದು ಸಿನೆಮಾ ರಿಲೀಸ್‌ ಆಗುವುದಾದರೆ ಸಿನೆಮಾ ನೋಡೋಕೆ ಹೋಗೋಣಾÌ ಅಂತ ಕೇಳಿದ್ರೆ ‘ಸ್ವಲ್ಪ ದಿನ ಕಾಯಿರಿ.. ಮೊಬೈಲ್‌ನಲ್ಲಿ ಬರಲಿದೆ’ ಅನ್ನುವ ಒಂದು ವರ್ಗ ಇಂದು ಕಾರ್ಯ ನಡೆಸುತ್ತಿದೆ. ಕೇಳಲು ಇದು ಸಣ್ಣ ವಿಷಯವಾದರೂ ಇದನ್ನು ಆಳವಾಗಿ ಗಮನಿಸಿದರೆ ಇದರ ಹಿಂದಿನ ರಹಸ್ಯಗಳು ಗೊತ್ತಾಗುತ್ತದೆ. ಲಕ್ಷ ಲಕ್ಷ ಸುರಿದು, ತುಳು ಭಾಷೆಯ ಮೇಲಿನ ಪ್ರೀತಿಯಿಂದ ನಾಯಕ ಶ್ರೇಷ್ಠರು ತಮ್ಮ ಕಲಾಚಾತುರ್ಯ ತೋರಿದರೆ, ತಂತ್ರಜ್ಞರು ಇದಕ್ಕಾಗಿ ಹಗಲಿರುಳು ದುಡಿದು ಸಿನೆಮಾ ಮಾಡಿದರೆ ಅದು ಒಂದರೆ ಕ್ಷಣದಲ್ಲಿ ಮೊಬೈಲ್‌ ಮೂಲಕ ಯಾರ್ಯಾರಿಗೋ ಸಿಕ್ಕು ಉಚಿತವಾಗಿ ನೋಡಿಬಿಡುವವರಿದ್ದರೆ ಇವರ ಶ್ರಮಕ್ಕೆ ಹಾಗಾದರೆ ಬೆಲೆಯೇ ಇಲ್ಲವೇ?

ಟಿವಿ ರೈಟ್ಸ್‌ ಕೂಡ ಪಡೆಯುವ ಮೊದಲೇ ಟಿವಿಯ ಕ್ಲ್ಯಾರಿಟಿಯಲ್ಲಿ ಸಿನೆಮಾ ಮೊಬೈಲ್‌ನಲ್ಲಿ ನೋಡಲು ಸಿಗುತ್ತದೆ ಅಂದರೆ ಸಿನೆಮಾ ಜಗತ್ತಿಗೆ ಇಂದು ಎದುರಾದ ಅಪಾಯ ಸಣ್ಣ ವಿಷಯವೇ ಅಲ್ಲ ಎಂಬುದು ಸ್ಪಷ್ಟ. ಈ ಬಗ್ಗೆ ತುಳು ಚಿತ್ರ ನಿರ್ಮಾಪಕರ ಸಂಘ ಸಹಿತ ತುಳು ಮನಸ್ಸಿನವರು ಇನ್ನಾದರೂ ಎಚ್ಚೆತ್ತುಕೊಂಡು ಪೈರಸಿ/ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವ ಕೆಟ್ಟ ಕೃತ್ಯಗಳನ್ನು ತಡೆಯಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next