Advertisement

ಮೊಬೈಲ್‌ ಎಂಬ ಮಾಯಾಲೋಕ 

12:30 AM Jan 11, 2019 | Team Udayavani |

ಮೊಬೈಲ್‌ನ ಒಳಗೊಂದು “ಮಾಯಾಲೋಕ’ ಖಂಡಿತ ಇದೆ. ಬಹುಶಃ ಹೆಚ್ಚಿನ ಎಲ್ಲರೂ ಇದನ್ನು ಕಂಡಿರುತ್ತಾರೆ. ಇದಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಈಗ ತುಂಬಾನೇ ಏರಿಕೆಯಾಗಿದೆ. ಯಾಕೆಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು ಮೊಬೈಲ್‌ನ ಮಾಯಾಲೋಕ ಎಂದು ಯಾಕೆ ಅಂದೆ ಅಂದ್ರೆ, ಇದರೊಳಗೆ ಒಮ್ಮೆ ಹೊಕ್ಕರೆ ಮತ್ತಷ್ಟು ತೂರಿಕೊಳ್ಳೋ ಬಯಕೆ ಎಲ್ಲರಲ್ಲೂ ಮೂಡುತ್ತದೆ. ಒಮ್ಮೆ ತೂರಿಕೊಂಡ ಮೇಲೆ ಇದರಿಂದ ಹೊರಬರಲು ತುಂಬಾ ಕಷ್ಟ . ಬಂದರೂ ಬದುಕು ತುಂಬಾ ಬೋರ್‌ ಅನಿಸುತ್ತದೆ, ಅಲ್ವಾ ? ಹೌದು. ಹಾಗೆಂದು ಇದನ್ನು ಬಳಸದೇ ಇರಲೂ ಆಗದು. ಈಗ ಮೊಬೈಲ್‌ ಹೊಂದುವುದು ಅಂದರೆ ಅದೊಂದು ಪ್ರಸ್ಟೀಜ್‌ನ ಪ್ರಶ್ನೆಯಾಗಿದೆ. ಎಲ್ಲರ ಕೈಯಲ್ಲೂ  ದೊಡ್ಡ ದೊಡ್ಡ ಮೊಬೈಲ್‌ಗ‌ಳು ರಾರಾಜಿಸುತ್ತಿವೆ. ಇಂದಿನ ಯುವಜನತೆ ಈ ಮೊಬೈಲ್‌ ಲೋಕದಲ್ಲಿ ಎಷ್ಟು ಮುಳುಗಿಹೋಗಿದೆ ಅಂದ್ರೆ, ಅಬ್ಟಾ…! ಮೊಬೈಲ್‌ಗ‌ಳಿಲ್ಲದ ಬದುಕು ಅವರಿಂದ ಊಹಿಸಲೂ ಕಷ್ಟಸಾಧ್ಯ. 

Advertisement

ಮೊಬೈಲ್‌ಗ‌ಳು ನಮ್ಮ ಸುತ್ತಲಿನ ಸ್ನೇಹ-ಸಂಬಂಧ ಗಳನ್ನು ಮರೆಯುವಷ್ಟು ನಮ್ಮನ್ನು ಆಕರ್ಷಿಸಿದರೆ ನಿಜವಾಗಿಯೂ ನಾವು ಯಾಂತ್ರಿಕರಾಗಿ ಸಂಬಂಧಗಳ ಅರ್ಥವನ್ನು, ಪ್ರೀತಿಯನ್ನೂ ಕಳೆದುಕೊಳ್ಳುವುದಂತೂ ಸತ್ಯ. ನಾವು ಮೊಬೈಲ್‌ ಬಳಸದೆ ಇರಲು ಸಾಧ್ಯವಿಲ್ಲ ನಿಜ. ಆದರೆ, ಅದನ್ನೇ ಪ್ರಪಂಚವಾಗಿಸಿ ಹೊರಗಿನ ಪ್ರಪಂಚವನ್ನು ಮರೆಯದಿರೋಣ. ಅದು ಜೀವವಿಲ್ಲದ ವಸ್ತು. ಅದರಿಂದ ಹೊರಗಿನ ಜೀವಂತ ಜೀವಗಳನ್ನು ಕಡೆಗಣಿಸದಿರೋಣ. ಅವರೇ ನಮಗೆ ಮುಖ್ಯ ಮತ್ತು ಆವಶ್ಯಕ. ಮೊಬೈಲ್‌ ಅನ್ನು ಎಷ್ಟು ಬೇಕೋ ಅಷ್ಟೇ ಬಳಸಿ ಆ ಮಾಯೆಯೆಂಬ ಲೋಕದಿಂದ ಹೊರಬರುವುದೂ ನಮಗೆ ತಿಳಿದಿದ್ದರೆ ಚೆನ್ನ.

ಮೊಬೈಲ್‌ ಹೊರತಾದ ಹೊರ ಪ್ರಪಂಚದಲ್ಲಿ ತುಂಬಾ ಸುಂದರವಾದ ಪರಿಸರ ಯಾವಾಗಲೂ ನಮಗಾಗಿ ತೆರೆದಿರುತ್ತದೆ. ಅದನ್ನು ನಾವು ನಮ್ಮ ಕಣ್ಣು ತೆರೆದು ನೋಡಬೇಕು. ಮೊಬೈಲ್‌ನಲ್ಲಿ ಗೆಳೆಯರೊಂದಿಗೆ, ಸಂಬಂಧಿಕರೊಂದಿಗೆ ಭೇಟಿಯಾಗುವುದು, ಮಾತನಾಡುವುದರಿಂದ ಏನೂ ಲಾಭವಿಲ್ಲ. ಬದಲಾಗಿ ಮೊಬೈಲ್‌ಗೆ ಅಂಟಿಕೊಳ್ಳದೆ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಬೆರೆಯಬೇಕು. ಅಪ್ಪ, ಅಮ್ಮ, ಹಿರಿಯ ಜೀವಗಳಾದ ಅಜ್ಜ-ಅಜ್ಜಿಯೊಂದಿಗೆ ಮಾತನಾಡಿ ಸಮಯ ಕಳೆಯಬೇಕು. ಹೀಗೆ ಮಾಡುವುದರಿಂದ ನಮ್ಮ ಸಂಬಂಧಗಳನ್ನು ಗಟ್ಟಿಗೊಳ್ಳುತ್ತವೆ. ಮೊಬೈಲನ್ನು ಮಿತವಾಗಿ ಬಳಸುವುದರಿಂದ ಯಾವ ತೊಂದರೆಯೂ ಇಲ್ಲ; ತಪ್ಪೂ ಇಲ್ಲ. ಮೊಬೈಲ್‌ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ ಹೌದಾದರೂ ಹೊರ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಅದು ಮಾಯಗೊಳಿಸದಿರಲಿ.

ಅಮೃತಾ ಕೆ. ಜಿ.
ತೃತೀಯ ವಿಜ್ಞಾನ ವಿಭಾಗ
ನೆಹರೂ ಮೆಮೋರಿಯಲ್‌ ಕಾಲೇಜು, ಸುಳ್ಯ                                                    

Advertisement

Udayavani is now on Telegram. Click here to join our channel and stay updated with the latest news.

Next