ಮತ್ತೊಂದು ದೆವ್ವದ ಸಿನಿಮಾ ಬರುತ್ತಿದೆ…! ಹಾಗಂತ ಇದು ಹೆದರಿಸೋ ದೆವ್ವವಲ್ಲ ಬಿಡಿ. ಯಾಕೆಂದರೆ, ಇದು ಡಿಜಿಟಲ್ ದೆವ್ವ. ನಿರ್ದೇಶಕ ನರೇಂದ್ರಬಾಬು ಹೀಗೊಂದು ಡಿಜಿಟಲ್ ದೆವ್ವವೊಂದನ್ನು ಸೃಷ್ಟಿ ಮಾಡಿದ್ದಾರೆ. “ನಂ.9 ಹಿಲ್‌ಟನ್ ಹೌಸ್’ ಮೂಲಕ ಹಾರರ್ ಕಥೆ ಹೇಳ್ಳೋಕೆ ಪುನಃ ಬಂದಿದ್ದಾರೆ. ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ರೆಡಿಯಾಗಿದ್ದಾರೆ. ದೆವ್ವಗಳಿಗೆ ಆಕಾರ ಇರುತ್ತಾ?
ಸಿನ್ಮಾಗಳಲ್ಲಿ ದೆವ್ವ ಹೀಗಿರುತ್ತೆ, ಹಾಗಿರುತ್ತೆ ಅಂತ ತೋರಿಸ್ತಾರೆ. ಆದರೆ, ದೆವ್ವ ಹೀಗೇ ಇರುತ್ತೆ ಅಂತ ಯಾರು ನೋಡಿದ್ದಾರೆ? ಆದರೆ, “ನಂ. 9 ಹಿಲ್‌ಟನ್ ಹೌಸ್’ ನಿರ್ದೇಶಕ ನರೇಂದ್ರಬಾಬು ಮಾತ್ರ ಮೊಬೈಲ್ ಕಾಲ್, ಮೆಸೇಜ್ ಮೂಲಕ ಹೇಗೆ ಇನ್ನೊಂದು ಮೊಬೈಲ್‌ಗೆ ಪ್ರೇತಾತ್ಮ ಪಾಸ್ ಆಗುತ್ತೆ, ಆ ಮೂಲಕ ಹೇಗೆಲ್ಲಾ ಅದು ಕಾಟ ಕೊಡುತ್ತೆ ಅನ್ನೋ ಹೊಸ ವಿಷಯವನ್ನು ಹೇಳ್ಳೋಕೆ ಹೊರಟಿದ್ದಾರಂತೆ.
ಸುಮಾರು 32 ದಿನಗಳ ಕಾಲ ಮಡಿಕೇರಿ, ಕುಶಾಲನಗರ ಸಮೀಪದ ಕಾಡುಬೆಟ್ಟ, ಮೈಸೂರು, ಬೆಂಗಳೂರಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ತೆಲುಗು, ತಮಿಳಿನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಒಂದು ಬ್ರಿಟಿಷ್ ಕಾಲದ ಮನೆಯಲ್ಲಿ ಸುಮಾರು 2.25 ಕೋಟಿ ರೂ. ಖರ್ಚು ಮಾಡಿ, ಹಾರರ್ ಸಿನ್ಮಾ ಮಾಡಿರುವ ಖುಷಿ ಅವರದು. ಒಂದು ದೆವ್ವದ ಕಥೆ ಹೇಳ್ಳೋಕೆ ಅಷ್ಟೊಂದು ಖರ್ಚು ಮಾಡಿದ್ದಾರಾ ಅಂದುಕೊಳ್ಳಬೇಡಿ,
ಇದು ಡಿಜಿಟಲ್ ದೆವ್ವ ಆಗಿರೋದ್ರಿಂದ ಖರ್ಚು ಜಾಸ್ತಿ ಅಂದುಕೊಳ್ಳಿ.ಇನ್ನು, ಈ ದೆವ್ವ ತೋರಿಸೋಕೆ ಅಷ್ಟೊಂದು ಖರ್ಚು ಮಾಡಿರೋದು ಸಿ.ವೆಂಕಟೇಶ್. ಈ ಹಿಂದೆ “ಮೂರು ಮನಸು ನೂರು ಕನಸು’ ಚಿತ್ರ ಮಾಡಿದ್ದರಂತೆ. ಒಂದು ಗ್ಯಾಪ್ ನಂತರ ಹಾರರ್ ಚಿತ್ರ ಮಾಡಿದ್ದಾರೆ. ಮೊದಲು ಇಲ್ಲಿ ಚಿತ್ರ ಬಿಡುಗಡೆ ಮಾಡಿ ನಂತರ ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಅಂದಹಾಗೆ, ಮೂರು ಭಾಷೆಯಲ್ಲಿ, ಮೂರು ಪ್ರತ್ಯೇಕ ಬ್ಯಾನರ್‌ನಲ್ಲಿ ಚಿತ್ರ ಮಾಡುತ್ತಿದ್ದಾರೆ ವೆಂಕಟೇಶ್. ಗಿರಿಧರ್ ದಿವಾನ್ ಇಲ್ಲಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಟಿ. ರವೀಶ್ ಹಾಡಿಗೆ ಸಂಗೀತ ನೀಡಿದ್ದಾರೆ. ಗಿರಿಧರ್‌ಗೆ ಇಲ್ಲಿ ಹಿನ್ನೆಲೆ ಸಂಗೀತ ಕೆಲಸ ಮಾಡುವಾಗಲೇ, ಚಿತ್ರದ ಬಗ್ಗೆ ನಂಬಿಕೆ ಬಂತಂತೆ. ಇದೊಂದು ಬೇರೆ ರೀತಿಯ ಚಿತ್ರ ಎಂಬುದು ಗಿರಿಧರ್ ಮಾತು. ಕಿರುತೆರೆ ನಟ ಮಧು ಸಾಗರ್‌ಗೆ ಇದು ಆರನೇ ಚಿತ್ರ.
ಅವರಿಗೆ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಅವರ ಪಾತ್ರ ಮೂಲಕವೇ ಚಿತ್ರಕ್ಕೊಂದು ತಿರುವು ಸಿಗುತ್ತೆ ಎಂಬುದು ಅವರ ಮಾತು. ಉಳಿದಂತೆ ಚಿತ್ರದಲ್ಲಿ ಲಲಿತ್ ಪ್ರಕಾಶ್, ಆಕಾಶ್ ನಟಿಸಿದ್ದಾರೆ. ಪ್ರಚಾರ ಕಾರ್ಯಕ್ಕೆ ನಿರ್ಮಾಪಕರ ಗೆಳೆಯ ಶ್ರೀಧರ್ ಎಂಬುವರು ಸಾಥ್ ನೀಡಿದ್ದಾರೆ. ಅಂದಹಾಗೆ, ಸುಮಾರು ನೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.