ವಿಜಯಪುರ : ಮೊಬೈಲ್ ಗಿಳಿಗೆ ಅಂಟಿಕೊಂಡಿರುವ ಮಕ್ಕಳು ಸಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಕಾನೂನು ಬಾಹೀರ ಕೃತ್ಯಗಳಿಗೆ ಎಳೆಸುತ್ತಿದ್ದಾರೆ. ಹೀಗಾಗಿ ಅಪ್ರಾಪ್ತ ಮಕ್ಕಳು ಶೈಕ್ಷಣಿಕ ವಿಷಯ ಮಾತ್ರವೇ ಬಳಸುವಂತಾಗುವ ಮೊಬೈಲ್ ಶೋಧ, ಇಲ್ಲವೇ ಪ್ರತ್ಯೇಕ ಆಪ್ ರೂಪಿಸಲು ಚಿಂತನೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಕ್ಕಳು ಮೊಬೈಲ್ ದಾಸದಾರಾಗಿದ್ದು, ಈ ವಿಷಯದಲ್ಲಿ ಶಿಕ್ಷಕರು, ಪಾಲಕರು, ಸಮಾಜ ಎಲ್ಲರ ಹೊಣೆ ಇದೆ. ಇಂತ ದುರವಸ್ಥೆಯಿಂದ ಮಕ್ಕಳನ್ನು ಹೊರ ತರಲು ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾನಸಿಕ ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದರು.
ರಾಜ್ಯದ 18 ಜಿಲ್ಲೆಗಳಲ್ಲಿ ಕಂಡು ಬರುವ ದೇವದಾಸಿ ಮಹಿಳೆಯರ ಮಕ್ಕಳಿಗೆ ಶೈಕ್ಷಣಿಕ ಪ್ರವೇಶದ ಸಂದರ್ಭದಲ್ಲಿ ತಂದೆಯ ಹೆಸರು ಕೇಳುವಂತಿಲ್ಲ. ಅಲ್ಲದೇ ದೇವದಾಸಿಯರ ಮಕ್ಕಳ ಶಿಕ್ಷಣ, ಹಾಸ್ಟೆಲ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯವನ್ನು ನಮ್ಮ ಆಯೋಗ ಗಂಭೀರವಾಗಿ ಪರಿಗಣಿಸುತ್ತದೆ. ಅಲ್ಲದೇ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾದರೂ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುತ್ತದೆ ಎಂದರು.
ಮಕ್ಕಳ ಮಾರಾಟ, ಬಾಲಕಾಮಿರ್ಕ ಪದ್ಧತಿ, ಅತ್ಯಾಚಾರ, ಮಾನಸಿಕ-ದೈಹಿಕ ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಆಯೋಗ ಸಹಿಸಿಕೊಳ್ಳುವುದಿಲ್ಲ. ಆರೋಪಿತರ ವಿರುದ್ಧ ದೂರು ದಾಖಲಿಸಿ, ವಿಚಾರಣೆ ನಡೆಸಿ, ಕಠಿಣ ಶಿಕ್ಷೆ ಕೊಡಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಜ. 20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್ ಉತ್ಸವ: ವೈವಿಧ್ಯ ಕಾರ್ಯಕ್ರಮ