Advertisement

ಬಸ್‌ ಚಾಲಕನ ಜೇಬಿನಲ್ಲಿ  ಮೊಬೈಲ್‌ ಸ್ಫೋಟ, ಗಾಯ

04:36 PM Mar 15, 2017 | Harsha Rao |

ಮಡಂತ್ಯಾರು/ಉಪ್ಪಿನಂಗಡಿ: ಬಸ್‌ ಚಲಾಯಿಸುತ್ತಿದ್ದ ಚಾಲಕನ ಕಿಸೆಯಲ್ಲಿದ್ದ ಮೊಬೈಲ್‌ ಏಕಾಏಕಿ ಸ್ಫೋಟಗೊಂಡು ಅವರು ಗಾಯಗೊಂಡ ಘಟನೆ ಅಳಕೆ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಚಾಲಕನ ಪ್ರಸಂಗಾವಧಾನ ಮತ್ತು ಬಸ್‌ ನಿಧಾನವಾಗಿ ಚಲಿಸುತ್ತಿದ್ದುದರಿಂದ ಭಾರೀ ದುರಂತವೊಂದು ತಪ್ಪಿದೆ.
ಘಟನೆಯಿಂದ ಶಿವಕೃಪಾ ಹೆಸರಿನ ಬಸ್‌ನ ಚಾಲಕ ಸಂದೇಶ್‌ (23) ಅವರ ಕಣ್ಣು ಮತ್ತು ಕೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ಅವರ ಅಂಗಿಯ ಕಿಸೆ ಸುಟ್ಟಿದೆ. ಅಂಗಿಯನ್ನು ಕಿತ್ತೆಸೆಯುವ ಯತ್ನದಲ್ಲಿ ಕೈಗೂ ಸುಟ್ಟ ಗಾಯಗಳಾಗಿವೆ. ಬೆಂಕಿಯಿಂದಾಗಿ ಚಾಲಕನ ತಲೆಕೂದಲು ಕೂಡ ಸುಟ್ಟಿದೆ ಎಂದು ಬಸ್‌ನ ಕಂಡಕ್ಟರ್‌ ಚೇತನ್‌ ವಿವರಿಸಿದ್ದಾರೆ.

Advertisement

ಏನಾಯಿತು?
ಎಂದಿನಂತೆ ಮಂಗಳವಾರ ಕೂಡ ಬೆಳಗ್ಗೆ 7 ಗಂಟೆಗೆ ಶಿವಕೃಪಾ ಬಸ್‌ ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಹೊರಟಿತ್ತು. 7.30ರ ಸುಮಾರಿಗೆ ಅಳಕೆ ಸ್ಟೋರ್‌ ತಲುಪುವಷ್ಟರಲ್ಲಿ ಚಾಲಕ ಸಂದೇಶ್‌ ಕಿಸೆಯಲ್ಲಿದ್ದ ಇಂಟೆಕ್ಸ್‌ ಕಂಪೆನಿಯ ಮೊಬೈಲ್‌ ಸ್ಫೋಟಗೊಂಡು ಬೆಂಕಿ ಕಾಣಿಸಿತು.

ಸ್ಫೋಟದ ಶಬ್ದ ಕೇಳಿ ಬೆಚ್ಚಿಬಿದ್ದ ಪ್ರಯಾಣಿಕರು ಕೂಡಲೇ ಬಸ್‌ ನಿಲ್ಲಿಸುವಂತೆ ಸೂಚಿಸಿದರು. ಚಾಲಕ ಕೂಡ ಪ್ರಸಂಗಾವನತೆ ತೋರಿ ಕೂಡಲೇ  ಬಸ್‌ ನಿಲ್ಲಿಸಿ, ಉರಿಯುತ್ತಿದ್ದ ಅಂಗಿಯನ್ನು ತೆಗೆದು ಹೊರಗೆ ಎಸೆಯುವಲ್ಲಿ ಯಶಸ್ವಿಯಾದರು. ಸ್ಫೋಟಕ್ಕಿಂತ ಸ್ವಲ್ಪವೇ ಮೊದಲು ಜನರನ್ನು ಇಳಿಸಲು ಬಸ್‌ ನಿಂತು ಹೊರಟಿದ್ದರಿಂದ ಬಸ್‌ ನಿಧಾನವಾಗಿ ಚಲಿಸುತ್ತಿದ್ದು, ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಲು ಸುಲಭವಾಯಿತು. ಸ್ಫೋಟ ಸಂಭವಿಸಿದ ಸಂದರ್ಭ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು.

ಬದಲಿ ಚಾಲಕ
ಮೊಬೈಲ್‌ ಸ್ಫೋಟದಿಂದ ಗಾಯಗೊಂಡ ಚಾಲಕ ಸಂದೇಶ್‌ ಅವರನ್ನು ಅದೇ ಬಸ್‌ನಲ್ಲಿ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೂಂದು ಬಸ್‌ನ ಚಾಲಕ ಘಟನಾ ಸ್ಥಳದಿಂದ ಉಪ್ಪಿನಂಗಡಿಗೆ ಬಸ್‌ ಚಾಲನೆ ಮಾಡಿದರು. ಅನಂತರ ಶಿವಕೃಪಾ ಬಸ್‌ನ ದಿನದ ಸಂಚಾರವನ್ನು ಮೊಟಕುಗೊಳಿಸಲಾಯಿತು. ಮೊಬೈಲ್‌ ಸ್ಫೋಟಿಸಿದಾಗ ಚಾಲಕನ ಕಣ್ಣಿಗೆ ಯಾವುದೋ ಹುಡಿ ಹಾರಿದಂತಾಗಿದ್ದು, ಚಿಕಿತ್ಸೆ  ನೀಡಲಾಗುತ್ತಿದೆ. ಉಳಿದಂತೆ ಬೆಂಕಿಯ ಸಣ್ಣಪುಟ್ಟ ಗಾಯಗಳಾಗಿವೆ.

ಒಂದೇ ರೂಮ್‌, ಒಂದೇ ಬಸ್‌
ಚಾಲಕ ಸಂದೇಶ್‌ ಮತ್ತು ನಿರ್ವಾಹಕ ಚೇತನ್‌ ಅವರು ಮಡಂತ್ಯಾರಿನಲ್ಲಿ ಬಾಡಿಗೆ ಕೊಠಡಿಯಲ್ಲಿ ಒಟ್ಟಿಗೆ ವಾಸವಾಗಿದ್ದಾರೆ. ಬೆಳಗ್ಗೆ 7 ಗಂಟೆಗೆ ಮೊದಲ ಟ್ರಿಪ್‌ ಇಲ್ಲಿಂದ ಹೊರಟು ರಾತ್ರಿ 7.15ಕ್ಕೆ ಕೊನೆಯ ಟ್ರಿಪ್‌ ಮುಗಿಸುವುದು ನಿತ್ಯದ ಕಾಯಕ. ಬೆಳಗ್ಗೆ ಬೇಗನೆ ಎದ್ದವರು ಇಬ್ಬರೂ ಮೊಬೈಲ್‌ಗೆ ಚಾರ್ಜ್‌ ಇಡುತ್ತೇವೆ. ಬಸ್‌ನಲ್ಲಿ ಚಾರ್ಜ್‌ ಮಾಡುವ ವ್ಯವಸ್ಥೆ ಇಲ್ಲದಿರುವುದರಿಂದ ಇಂದೂ ರೂಂನಲ್ಲಿಯೇ ಪೂರ್ತಿ ಚಾರ್ಜ್‌ ಮಾಡಿ ಹೊರಟಿದ್ದೆವು. ನಾನು 4-5 ವರ್ಷಗಳಿಂದ ಇದೇ ಬಸ್‌ನಲ್ಲಿ ದುಡಿಯುತ್ತಿದ್ದೇನೆ. 3-4 ವರ್ಷಗಳ ಚಾಲನೆಯ ಅನುಭವ ಹೊಂದಿರುವ ಸಂದೇಶ್‌ 8 ತಿಂಗಳ ಹಿಂದೆ ಈ ಬಸ್‌ಗೆ ಚಾಲಕನಾಗಿ ಸೇರಿದ್ದರು ಎಂದು ಬಸ್‌ ನಿರ್ವಾಹಕ ಚೇತನ್‌ ವಿವರಿಸಿದ್ದಾರೆ.

Advertisement

ವರ್ಷದ ಹಿಂದೆ ಖರೀದಿ
ವರ್ಷದ ಹಿಂದೆಯಷ್ಟೇ ಉಪ್ಪಿನಂಗಡಿಯ ಅಂಗಡಿಯಲ್ಲಿ 5,900 ರೂ. ನೀಡಿ ಇಂಟೆಕ್ಸ್‌  ಕಂಪೆನಿಯ ಟಚ್‌ ಸ್ಕ್ರೀನ್‌ ಮೊಬೈಲ್‌ ಖರೀದಿಸಲಾಗಿತ್ತು. ಇಂದಿನವರೆಗೂ ಇತರ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಚಾಲಕ ಸಂದೇಶ್‌ ಅವರು ಇದೇ ವೇಳೆ ತಿಳಿಸಿದ್ದಾರೆ.

ಉರಿಯುತ್ತಿತ್ತು ಬ್ಯಾಟರಿ
ಮೊಬೈಲ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡ ಕೂಡಲೇ ಸಂದೇಶ್‌ ಅವರು ಅಂಗಿಯನ್ನು ತೆಗೆದು ಹೊರಗಡೆ ಎಸೆದರು. ಆದರೆ ಈ ಸಂದರ್ಭ ಕಿಸೆಯಲ್ಲಿ ಛಿದ್ರಗೊಂಡಿದ್ದ ಮೊಬೈಲ್‌ನ ಬ್ಯಾಟರಿ ಅಲ್ಲಿಯೇ ಕೆಳಗೆ ಬಿದ್ದು ಚಾಲಕನ ಕಾಲಿನಡಿ ಉರಿಯುತ್ತಿತ್ತು. ಕೂಡಲೇ ಚಾಲಕನ ಹಿಂಬದಿ ಬಕೆಟ್‌ನಲ್ಲಿದ್ದ ನೀರನ್ನು ಅದಕ್ಕೆ ಸುರಿದು ಬೆಂಕಿಯನ್ನು ನಂದಿಸಲಾಯಿತು. ಸ್ಫೋಟದಿಂದ ಬ್ಯಾಟರಿ ಸುಟ್ಟು ಕರಕಲಾಗಿದೆ ಎಂದು ಕಂಡಕ್ಟರ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next