Advertisement

ಮೊಬೈಲ್‌ ಮತ್ತು ಅನುಮಾನಗಳು

07:30 PM Oct 03, 2019 | mahesh |

ಯಾರ ಬಳಿಯಲ್ಲಿ ನೋಡಿದರೂ ಮೊಬೈಲ್‌. ಮೊಬೈಲ್‌ ಇಲ್ಲದ ವ್ಯಕ್ತಿಯನ್ನು ಇಂದು ಹುಡುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವಿಂದು ತಲುಪಿದ್ದೇವೆ. ಒಂದು ಕ್ಷಣ ಮೊಬೈಲ್‌ ನಮ್ಮ ಬಳಿ ಇಲ್ಲವೆಂದರೆ ಆಕಾಶವೇ ತಲೆಕೆಳಗಾಗಿ ನಮ್ಮ ತಲೆ ಮೇಲೆ ಬಿತ್ತೋ ಎಂಬಂತೆ ನಮ್ಮ ವರ್ತನೆಗಳು ಬದಲಾಗುತ್ತಿವೆ. ಮೊಬೈಲ್‌ನ್ನು ನಾವು ಬಿಟ್ಟರೂ, ನಮ್ಮನ್ನು ಮೊಬೈಲ್‌ ಬಿಡುವುದಿಲ್ಲ ಎಂಬ ಮಾತು ಇಂದು ಸತ್ಯವಾಗತೊಡಗಿದೆ.

Advertisement

ಇತ್ತೀಚೆಗಷ್ಟೆ ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಆಂತರಿಕ ಪರೀಕ್ಷೆಗಳು ಮುಗಿದವು. ಪರೀಕ್ಷೆ ಮುಗಿದ ಖುಷಿ ನನಗೆ ಎಷ್ಟಿತ್ತೆಂದರೆ ಗೂಡಿನಿಂದ ಪಕ್ಷಿಯೊಂದು ತಪ್ಪಿಸಿಕೊಂಡು ಸ್ವತಂತ್ರವಾಗಿ ಹಾರಲು ತವಕಿಸಿದಂತಾಗಿತ್ತು. ಪರೀಕ್ಷೆ ಮುಗಿದ ದಿನ ಶನಿವಾರ. ಮರುದಿನ ಭಾನುವಾರ ನಾನು ಮಾಡಬೇಕಾದ ಕೆಲಸದ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ನನ್ನ ಕಣ್ಣುಗಳ ದೃಷ್ಟಿ ಮತ್ತು ನನ್ನ ಮನಸ್ಸೆಲ್ಲ ನನ್ನ ಮೊಬೈಲ್‌ ಕಡೆಗೆ ಸೆಳೆಯಲಾರಂಭಿಸಿತು. “ಆಯ್ತು, ಸರಿ’ ಎಂದು ನನ್ನ ಬ್ಯಾಗಿಗೆ ಕೈ ಹಾಕಿದಾಗ ನನ್ನ ಮೊಬೈಲ್‌ ಬ್ಯಾಗಿನಲ್ಲಿ ಇರಲಿಲ್ಲ. ಮತ್ತಷ್ಟು ತಡಬಡಾಯಿಸಿ ನನ್ನ ಬ್ಯಾಗ್‌ನಲ್ಲಿ ಮೊಬೈಲನ್ನು ಹುಡುಕಿದೆ. ಸಿಗಲಿಲ್ಲ.

ನನ್ನ ತಲೆಯಲ್ಲಿ ಅನುಮಾನ ಮೂಡಲಾರಂಭಿ ಸಿತು. ಒಂದನೆಯದಾಗಿ ನನ್ನ ಮೊಬೈಲ್‌ ಕಳೆದುಹೋಗಿರಬಹುದೆಂಬ ಶಂಕೆ. ಎರಡನೆಯದಾಗಿ ನಾನು ಉಳಿದುಕೊಂಡಿದ್ದ ಹಾಸಿಗೆಯಲ್ಲಿಯೇ ಮೊಬೈಲ್‌ ಬಿಟ್ಟುಬಂದಿರಬಹುದೆಂಬ ಸಂದೇಹ. ಯಾರಾದಾರೂ ತೆಗೆದಿರಬಹುದೆಂಬ ಗುಮಾನಿ. ಅನುಮಾನಗಳನ್ನು ತಲೆಯಲ್ಲಿ ಹೊತ್ತು ಕೊಂಡು ಅಂತೂ ನನ್ನ ಮನೆಗೆ ತಲುಪಿದೆ. ಮನೆಗೆ ತಲುಪಿದಾಗಲೂ ನನಗೆ ನನ್ನ ಮೊಬೈಲ್‌ನ ಬಗ್ಗೆಯೇ ಯೋಚನೆ. ಮನೆಯ ಗೋಡೆಯ ಮೇಲೆ, ನಾನು ಬರೆಯಲು ಉಪಯೋಗಿಸುತ್ತಿದ್ದ ಟೇಬಲ್‌ ಮೇಲೆ ನನ್ನ ಮೊಬೈಲ್‌ ಇರುವಂತೆ ನನ್ನ ಕಣ್ಣುಗಳಿಗೆ ಭಾಸವಾಗುತ್ತಿತ್ತು. ಈ ಗೊಂದಲ, ಬ್ರಾಂತಿಗಳ ನಡುವೆ ಈ ಮೊದಲೇ ನಾನು ಆಲೋಚಿಸಿದ್ದ ಭಾನುವಾರದ ಕೆಲಸವನ್ನು ಮತ್ತೂಂದು ಭಾನುವಾರಕ್ಕೆ ಮುಂದೂಡುವ ಅನಿವಾರ್ಯತೆ ಎದುರಾಯಿತು.

ಹೀಗೆ ನನ್ನ ಕೆಲಸಗಳೆಲ್ಲವೂ ತಲೆಕೆಳಗಾದವು. ಈ ಪರಿಸ್ಥಿಗೆ ಕಾರಣ ಮೊಬೈಲ್‌ ಎಂಬ ಮಾಯೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

ಅಂತೂ ಸೋಮವಾರ ಬಂದೇ ಬಿಟ್ಟಿತು. ಈಗ ನನ್ನ ಅನುಮಾನವನ್ನು ಖಚಿತಪಡಿಸಿಕೊಳ್ಳಲು ಹಾಸ್ಟೆಲ್‌ಗೆ ತೆರಳಿದಾಗ ಅಲ್ಲಿ ನನ್ನ ಮೊಬೈಲ್‌ ಚಾರ್ಜ್‌ ಇಲ್ಲದೆ ಅನಾಥವಾಗಿ ಬಿದ್ದಿರುವುದನ್ನು ಕಂಡೆ. ನನಗೊಮ್ಮೆ ಹೋದ ಜೀವ ವಾಪಸು ಬಂದಷ್ಟು ಖುಷಿಯಾಯಿತು.

Advertisement

ಮಂಜುನಾಥ ಬಿ. ವಿ.
ಪ್ರಥಮ ಎಂ.ಎ ಸರ್ಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ , ತೆಂಕನಿಡಿಯೂರು

Advertisement

Udayavani is now on Telegram. Click here to join our channel and stay updated with the latest news.

Next