ದಿಸ್ಪುರ್ : ಅಸ್ಸಾಂನ ನಾಗಾಂವ್ ನಲ್ಲಿ ಉದ್ರಿಕ್ತರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ನಂತರ ಆಡಳಿತವು ಬುಲ್ಡೋಜರ್ ಗಳನ್ನು ಬಳಸಿ ಆರೋಪಿಗಳ 5 ಮನೆಗಳನ್ನು ನೆಲಸಮಗೊಳಿಸಿದೆ.
ಶನಿವಾರ ಮೇ 21 ರಂದು ಪೊಲೀಸ್ ಕಸ್ಟಡಿಯಲ್ಲಿ ಸಫೀಕುಲ್ ಇಸ್ಲಾಂ ಎಂಬ ವ್ಯಕ್ತಿ ಸಾವನ್ನಪ್ಪಿದ ನಂತರ ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ ಜನಸಮೂಹ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿತ್ತು. ನಾಗಾಂವ್ ಜಿಲ್ಲಾಡಳಿತವು ಬಟದ್ರಬಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಐದು ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದೆ.
ಬಟದ್ರಬಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು 20 ಜನರನ್ನು ಬಂಧಿಸಿದ್ದೇವೆ. ಪ್ರಕರಣದಲ್ಲಿ ಕೇಳಿ ಬಂದಿರುವ ನಾಲ್ವರು ಮಹಿಳೆಯರನ್ನು ಸಹ ಬಂಧಿಸಲಾಗಿದೆ. ಪ್ರಭಾರಿ ಪಿಎಸ್ ಅವರನ್ನು ಅಮಾನತುಗೊಳಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಐಜಿ ಸತ್ಯರಾಜ್ ಹಜಾರಿಕಾ ತಿಳಿಸಿದ್ದಾರೆ.
ನಾವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ವ್ಯಕ್ತಿಗಳ ಪೈಕಿ 3 ಮಂದಿಯನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ ಎಂದು ಎಸ್ಪಿ ಲೀನಾ ಡೋಲಿ ತಿಳಿಸಿದ್ದಾರೆ.
ಸಫೀಕುಲ್ ಇಸ್ಲಾಂ ಅವರ ದುರದೃಷ್ಟಕರ ಸಾವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಬಟದ್ರಬಾ ಪಿಎಸ್ ಓಸಿಯನ್ನು ಅಮಾನತುಗೊಳಿಸಿದ್ದೇವೆ. ನಮ್ಮ ಕಡೆಯಿಂದ ಯಾವುದೇ ಅವ್ಯವಹಾರ ನಡೆದಿದ್ದರೆ ಅದನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸುತ್ತೇವೆ ಎಂದು ಅಸ್ಸಾಂ ಡಿಜಿಪಿ ಭಾಸ್ಕರ ಜ್ಯೋತಿ ಮಹಾಂತ ಹೇಳಿದ್ದಾರೆ.