ಲಕ್ನೋ: ಅಝಾಂಗಢ್ ಜಿಲ್ಲೆಯ ಬಸ್ಗಾಂವ್ ಗ್ರಾಮದ ಮುಖ್ಯಸ್ಥನನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆಗೈದ ಘಟನೆಯಿಂದ ರೊಚ್ಚಿಗೆದ್ದ ಜನರು ಹಲವಾರು ವಾಹಗಳು ಮತ್ತು ಪೊಲೀಸ್ ಘಟಕವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಝಾಂಗಢ್ ನ ಬಸ್ಗಾಂವ್ ಗ್ರಾಮದ ಮುಖ್ಯಸ್ಥ ಸತ್ಯಮೇವ್ (42ವರ್ಷ) ಎಂಬವವರನ್ನು ಕಿಡಿಗೇಡಿಗಳು ಗುಂಡು ಹೊಡೆದು ಸಾಯಿಸಿದ್ದರು. ಇದರಿಂದಾಗಿ ಸತ್ಯಮೇವ್ ಬೆಂಬಲಿಗರು ಹಿಂಸಾಚಾರಕ್ಕೆ ಇಳಿದಿದ್ದರು.
ನೂರಾರು ಜನರು ಬೀದಿಗಿಳಿದು ಗಲಾಟೆ ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮಗುವೊಂದು ಸಾವನ್ನಪ್ಪಿದ್ದು, ಇದರಿಂದಾಗಿ ಜನ ಮತ್ತಷ್ಟು ಆಕ್ರೋಶಗೊಂಡು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ವರದಿ ತಿಳಿಸಿದೆ.
ಗಲಭೆಕೋರರು ಸಮೀಪದ ಬೋಂಗಾರಿಯಾ ಪೊಲೀಸ್ ಔಟ್ ಪೋಸ್ಟ್ ಗೂ ಬೆಂಕಿ ಹಚ್ಚಿ ಸುಟ್ಟುಹಾಕಿರುವುದಾಗಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಗ್ರಾಮ ಮುಖ್ಯಸ್ಥನ ಹತ್ಯೆ ಹಾಗೂ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಔಟ್ ಪೋಸ್ಟ್ ಠಾಣಾಧಿಕಾರಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೃತರ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರು ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಯಾರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೋ ಅವರ ವಿರುದ್ಧ ಎನ್ ಎಸ್ಎಯಂತಹ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.