ಅಗರ್ತಲಾ: ಹಸುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆಂಬ ಶಂಕೆಯಲ್ಲಿ ಮೂವರು ಯುವಕರನ್ನು ಮನಬಂದಂತೆ ಥಳಿಸಿದ ಗ್ರಾಮಸ್ಥರು ಹತ್ಯೆ ಮಾಡಿದ ಘಟನೆ ತ್ರಿಪುರ ರಾಜ್ಯದ ಖೊವಾಯಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕರನ್ನು ಜಾಯೇದ್ ಹುಸೈನ್ (30 ವ), ಬಿಲಾಲ್ ಮಿಹ್ (28 ವ) ಮತ್ತು ಸೈಫುಲ್ ಇಸ್ಲಾಂ (18 ವ) ಎಂದು ಗುರುತಿಸಲಾಗಿದೆ.
ನಮನ್ಜೋಪರ ಗ್ರಾಮಸ್ಥರು ಮುಂಜಾನೆ 4.30ರ ಸುಮಾರಿಗೆ ಹಸುಗಳನ್ನು ಸಾಗಿಸಿಕೊಂಡು ಮಿನಿ ಟ್ರಕ್ ಒಂದು ಅಗರ್ತಲಾ ಕಡೆಗೆ ಹೋಗುವುದನ್ನು ಕಂಡರು. ಹಸುಗಳನ್ನು ಕಳ್ಳತನ ಮಾಡಿರಬಹುದೆಂಬ ಶಂಕೆಯಿಂದ ಟ್ರಕ್ ನ್ನು ಬೆನ್ನಟ್ಟಿದ ಗ್ರಾಮಸ್ಥರು ಉತ್ತರ ಮಹಾರಾಣಿಪುರ ಗ್ರಾಮದಲ್ಲಿ ಅಡ್ಡ ಹಾಕಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು
ಮಿನಿ ಟ್ರಕ್ ಅಡ್ಡಹಾಕಿದ ಜನರು ಯುವಕರನ್ನು ಹೊರಗೆಳೆದು ಮನಬಂದಂತೆ ಥಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಓರ್ವ ತಪ್ಪಿಸಿಕೊಂಡು ಓಡಿದ್ದಾನೆ. ಆತನನ್ನು ಬೆನ್ನತ್ತಿದ್ದ ಗುಂಪು ಅಲ್ಲಿನ ಬುಡಕಟ್ಟು ಪ್ರದೇಶವಾದ ಮುಂಗ್ಯಾಕಮಿ ಎಂಬಲ್ಲಿ ಹಿಡಿದು ಥಳಿಸಿದ್ದಾರೆ. ಜನರ ಥಳಿತಕ್ಕೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಯುವಕರು ಸಾವನ್ನಪ್ಪಿದ್ದರು ಎಂದು ಕಿರಣ್ ಕುಮಾರ್ ಹೇಳಿದರು.