ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ವಿಚಾರವಾಗಿ ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಪ್ರಕ್ಷುಬ್ದ ವಾತಾವರಣ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿ ತಹಬದಿಗೆ ತಂದಿದ್ದು, ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ವಿವಾದಾತ್ಮಕ ಪೋಸ್ಟ್ ಖಂಡಿಸಿ ಒಂದು ಕೋಮಿನ ನೂರಾರು ಜನರು ಶನಿವಾರ ಮಧ್ಯರಾತ್ರಿ ವೇಳೆಗೆ ಬೀದಿಗಿಳಿದು ಕಂಡಕಂಡ ಕಡೆಯೆಲ್ಲಾ ಕಲ್ಲು ತೂರಾಟ ನಡೆಸಿದ್ದಾರೆ.
ಶನಿವಾರ ರಾತ್ರಿ ಏಕಾಏಕಿ ನೂರಾರು ಜನರು ಬೀದಿಗಿಳಿದು ಪೊಲೀಸ್ ವಾಹನ, ಆಸ್ಪತ್ರೆ, ದೇವಸ್ಥಾನ, ಮನೆ, ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು. ಬೀದಿದೀಪಗಳನ್ನು ಹೊಡೆದು ಹಾಕಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ: ಕುಮಾರಸ್ವಾಮಿ
ಘಟನೆಯಲ್ಲಿ ಇನ್ಸ್ ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿದ್ದರು.
ರಾತ್ತಿಯೇ ಪರಿಸ್ಥಿತಿ ತಹಬದಿಗೆ ತಂದ ಪೊಲೀಸರು ಈಗಾಗಲೇ ಅನೇಕರನ್ನು ವಶಕ್ಕೆ ಪಡೆದಿದ್ದಾರೆ. ವಿವಾದಾತ್ಮಕ ಪೋಸ್ಟ್ ಮಾಡಿದ ಯುವಕನ್ನು ಬಂಧಿಸಲಾಗಿದೆ.
ಹಳೇ ಹುಬ್ಬಳ್ಳಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದು ಉಸ್ತುವಾರಿ ವಹಿಸಿದ್ದಾರೆ. ಸದ್ಯ ಸ್ಥಿತಿ ನಿಯಂತ್ರಣದಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ.