Advertisement

ಸಭಾಪತಿಗಳ ಮೇಲೆ ಎಫ್ಐಆರ್‌ ದಾಖಲು

12:14 AM Mar 11, 2022 | Team Udayavani |

ಬೆಂಗಳೂರು: ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಸಭಾಪತಿಗಳ ವಿರುದ್ಧ ಎಫ್ಐಆರ್‌ ದಾಖಲಿಸುವ ಮೂಲಕ ಪೀಠಕ್ಕೆ ಅಪ ಮಾನ ಮಾಡಿದ್ದು, ತಪ್ಪಿತಸ್ಥ ಅಧಿಕಾರಿಯನ್ನು ತತ್‌ಕ್ಷಣ ಅಮಾನತು ಗೊಳಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಘಟನೆ ಗುರುವಾರ ನಡೆಯಿತು.

Advertisement

ಬಜೆಟ್‌ ಮೇಲೆ ಭಾಷಣದ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಯು. ಬಿ. ವೆಂಕಟೇಶ್‌, “ಅತ್ತ ನೀರಿಗಾಗಿ ಪಾದಯಾತ್ರೆ ನಡೆಸುವವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗುತ್ತದೆ. ಇತ್ತ ಸಭಾಪತಿಗಳ ವಿರುದ್ಧವೇ ಅನುಮತಿ ಪಡೆಯದೆ ಎಫ್ಐಆರ್‌ ದಾಖಲಾಗುತ್ತದೆ. ಅಂತಹ ಅಧಿಕಾರಿ ವಿರುದ್ಧ ಸರಕಾರ ಕ್ರಮವನ್ನೂ ಕೈಗೊಳ್ಳುವುದಿಲ್ಲ. ತಾವೂ (ಸಭಾಪತಿಗಳು) ಭೀಷ್ಮನ ದಯಾ ಮರಣದಂತೆ ಕಾಯುತ್ತಿದ್ದೀರಿ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ ಕೂಡ ಸಾಥ್‌
ದನಿಗೂಡಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರೆಲ್ಲರೂ ಸಭಾಪತಿಗಳ ಬೆಂಬಲಕ್ಕೆ ನಿಂತರು. ಇದು ವೈಯಕ್ತಿಕ ವಾಗಿ ಬಸವರಾಜ ಹೊರಟ್ಟಿ ಅವರಿಗಾದ ಅವಮಾನವಲ್ಲ; ಸಭಾಪತಿಗಳ ಸ್ಥಾನಕ್ಕೆ ಮಾಡಿದ ಅಪಮಾನ. ಆದ್ದರಿಂದ ಲೋಪ ಎಸಗಿದ ಅಧಿಕಾರಿಯನ್ನು ತತ್‌ಕ್ಷಣ ಅಮಾನತು ಮಾಡಬೇಕು ಎಂದು ಪಟ್ಟುಹಿಡಿದರು. ಜೆಡಿಎಸ್‌ ಸದಸ್ಯರು ಒಂದು ಹೆಜ್ಜೆ ಮುಂದೆ ಹೋಗಿ, ಬಾವಿಗಿಳಿದು ಪ್ರತಿಭಟಿಸಲು ಮುಂದಾದರು.

ಕಲಾಪ ಬಹಿಷ್ಕಾರದ ಎಚ್ಚರಿಕೆ
ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಸಭಾಪತಿ ಸ್ಥಾನವು ಒಂದು ಸಾಂವಿಧಾನಿಕ ಹುದ್ದೆ. ಆ ಸ್ಥಾನದಲ್ಲಿದ್ದವರ ವಿರುದ್ಧ ಎಫ್ಐಆರ್‌ ದಾಖಲಿಸುವ ಮುನ್ನ ಹಲವು ಪ್ರಕ್ರಿಯೆಗಳಿವೆ. ಆದರೆ, ಅದಾವುದನ್ನೂ ಪಾಲಿಸದೆ ಕೇಸು ದಾಖಲಿಸಿರುವುದು ಕಾನೂನು ಬಾಹಿರ ವಾದ ಕ್ರಮವಾಗಿದೆ. ಆದ್ದರಿಂದ ಲೋಪ ಎಸಗಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಇಲ್ಲವಾದರೆ ಕಲಾಪ ಬಹಿಷ್ಕರಿಸಲಾಗುವುದು ಎಂದು ಹೇಳಿದರು. ಮೂರೂ ಪಕ್ಷಗಳ ಹಲವರು ಈ ವಿಷಯದ ಬಗ್ಗೆ ಮಾತನಾಡಿದರು.

2-3 ದಿನಗಳಲ್ಲಿ ಕ್ರಮ: ಗೃಹ ಸಚಿವ
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, “ಸಭಾಪತಿಗಳ ಪೀಠ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರ ಬಗ್ಗೆ ನಿಮ್ಮಷ್ಟೇ ಪ್ರೀತಿ ಮತ್ತು ಗೌರವ ನಮಗೂ ಇದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಪ್ರಕರಣ ಬಹುತೇಕ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಎರಡು ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಅಂದು ಮಧ್ಯರಾತ್ರಿ 12ರ ಸುಮಾರಿಗೆ ನನ್ನ ವಿರುದ್ಧ ಆನ್‌ಲೈನ್‌ ಮೂಲಕವೇ ಕೇಸು ದಾಖಲಿಸಿ, ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕರೆ ಮಾಡಿ, “ತಮ್ಮ ವಿರುದ್ಧ ಕೇಸು ದಾಖಲಾಗಿದೆ ಸರ್‌’ ಎಂದು ಹೇಳಿದಾಗ ಬೇಸರವಾಯಿತು.
– ಬಸವರಾಜ ಹೊರಟ್ಟಿ, ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next