ಚಿತ್ರದುರ್ಗ: ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಬಗ್ಗೆ ದಿನವೂ ಹತ್ತಾರು ದೂರುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ನವೀನ್ ಯಾವುದೇ ಮುನ್ಸೂಚನೆ ನೀಡದೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಡಯಾಲಿಸಿಸ್‌ಗೆ ಒಳಗಾಗಿದ್ದ ರೋಗಿಗಳು, ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.
ಡಯಾಲಿಸಿಸ್ ರೋಗಿಗಳಿಗೆ ಸರಬರಾಜಾಗಬೇಕಿದ್ದ ಇಂಜೆಕ್ಷನ್‌ಗಳು ಕಳೆದ ಎರಡು ತಿಂಗಳಿನಿಂದ ನಿಂತಿದೆ. ಇಲ್ಲಿನ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಬೆಡ್‌ಗಳ ಮೇಲಿನ ಬೆಡ್‌ಶೀಟ್‌ಗಳನ್ನು ಪ್ರತಿ ದಿನ ಬದಲಾಯಿಸುತ್ತಿಲ್ಲ ಎಂದು ದೂರಿದರು. ಡಯಾಲಿಸ್ ಕೇಂದ್ರದಲ್ಲಿ ಪ್ರತಿ ತಿಂಗಳು 100-150 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಾರೆ. ಇಲ್ಲಿಗೆ 12 ಯಂತ್ರಗಳನ್ನು ನೀಡಿದ್ದು, ಇದರಲ್ಲಿ 9 ಮಾತ್ರ ಕಾರ್ಯನಿರ್ವಹಿಸುತ್ತಿವೆ. 3 ಯಂತ್ರಗಳು ಕೆಟ್ಟಿದ್ದರೂ ರಿಪೇರಿ ಮಾಡಿಸಿಲ್ಲ ಎಂದು ಸಾರ್ವಜನಿಕರು ಗಮನಕ್ಕೆ ತಂದರು. ಎಲ್ಲ ಸಮಸ್ಯೆಗಳನ್ನು ಆಲಿಸಿದ ಕೆ.ಎಸ್. ನವೀನ್ ಸ್ಥಳದಲ್ಲಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಅವರಿಗೆ ಡಯಾಲಿಸಿಸ್ ಕೇಂದ್ರ ಹಾಗೂ ಆಸ್ಪತ್ರೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಸಭೆ ಕರೆಯಿರಿ. ಅಲ್ಲಿ ವಿವರವಾಗಿ ಚರ್ಚಿಸಿ ಪರಿಹಾರ ಕಂಡು ಹಿಡಿಯೋಣ. ಈ ಸಭೆಯಲ್ಲಿ ಡಯಾಲಿಸಿಸ್ ಕೇಂದ್ರದ ಗುತ್ತಿಗೆದಾರರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲರೂ ಹಾಜರಿರಬೇಕು ಎಂದು ಸೂಚಿಸಿದರು.
ಸರ್ಕಾರಿ ಆಸ್ಪತ್ರೆ, ಎಲ್ಲ ವ್ಯವಸ್ಥೆಯೂ ಇದೆ ಎನ್ನುವ ಕಾರಣಕ್ಕೆ ಬಡವರು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಇಲ್ಲಿ ಎಲ್ಲ ಚಿಕಿತ್ಸೆ ಸಿಗಬೇಕು. ಯಾವುದೇ ಅವ್ಯವಸ್ಥೆಗಳು ಆಗಬಾರದು. ಇದೆಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಹೋಗುವುದು ಜಿಲ್ಲಾ ಶಸ್ತ್ರಚಿಕಿತ್ಸಕರ ಹೊಣೆಯಾಗಿದೆ. ನಿಮಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಎಲ್ಲವೂ ಸರಿಯಿದೆ ಎನ್ನುವಂತಿಲ್ಲ. ಸಾಕಷ್ಟು ಅವ್ಯವಸ್ಥೆ, ಕೊರತೆಗಳಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಸಭೆ ನಡೆಸಬೇಕು. ಡಿಎಚ್‌ಒ, ಡಯಾಲಿಸಿಸ್ ಟೆಂಡರ್‌ದಾರರು ಹಾಜರಿದ್ದು ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಚಿತ್ರದುರ್ಗ ಐತಿಹಾಸಿಕ ಜಿಲ್ಲೆ. ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು, ಎಲ್ಲ ರೋಗಗಳಿಗೂ ಚಿಕಿತ್ಸೆ ಸಿಗಬೇಕು. ಇಲ್ಲಿಂದ ಮತ್ತೂಂದು ಆಸ್ಪತ್ರೆಗೆ ಹೋಗಿ ಎಂಬ ಮಾತುಗಳು ಬರಬಾರದು ಎಂದು ತಿಳಿಸಿದರು.