ಬೆಂಗಳೂರು: ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 6 ಸ್ಥಾನಗಳ ಚುನಾವಣೆಗೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ ಶೇ.95.27 ಮತದಾನವಾಗಿದೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಅತಿ ಕಡಿಮೆ, ಅಂದರೆ ಶೇ.65.86 ಮತದಾನವಾಗಿದೆ. ಉಳಿದಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.88.07, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ.69.51, ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಶೇ.78.19, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.82.56 ಮತದಾನವಾಗಿದೆ. ಜೂನ್ 6ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸಹಿತ 6 ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಓರ್ವ ಮಹಿಳೆ, ವಾಟಾಳ್ ನಾಗರಾಜ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯ ಡಾ| ಚಂದ್ರಶೇಖರ್ ಬಿ. ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಸದಸ್ಯ ಅ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯ ಡಾ| ವೈ.ಎ. ನಾರಾಯಣಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ನಿವೃತ್ತಿ ಹಾಗೂ ನೈಋತ್ಯ ಪದವೀಧರ ಕ್ಷೇತ್ರದಿಂದ ಗೆದ್ದಿದ್ದ ಆಯನೂರು ಮಂಜುನಾಥ್ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗೆ ಸೋಮವಾರ ಮತದಾನ ನಡೆದಿದೆ.
ಈ ಬಾರಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಾ| ಚಂದ್ರಶೇಖರ್ ಪಾಟೀಲ್, ಬಿಜೆಪಿಯಿಂದ ಅಮರನಾಥ್ ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಮೋಜಿಗೌಡ, ಬಿಜೆಪಿಯಿಂದ ಅ.ದೇವೇಗೌಡ, ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆಯನೂರು ಮಂಜುನಾಥ್, ಬಿಜೆಪಿಯಿಂದ ಡಾ| ಧನಂಜಯ್ ಸರ್ಜಿ ಸ್ಪರ್ಧಿಸಿದ್ದರೆ, ರಘುಪತಿ ಭಟ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ ಬಿಜೆಪಿಯ ಡಾ| ವೈ.ಎ.ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ| ಕೆ.ಕೆ. ಮಂಜುನಾಥ್ ಕುಮಾರ್, ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ, ದಕ್ಷಿಣ ಶಿಕ್ಷಕ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮರಿತಿಬ್ಬೇಗೌಡ, ಜೆಡಿಎಸ್‌ನ ಕೆ. ವಿವೇಕಾನಂದ ಕಣದಲ್ಲಿದ್ದಾರೆ.