Advertisement

ಎಂಎಲ್ಸಿ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

10:56 AM May 22, 2018 | |

ಕಲಬುರಗಿ: ಜೂನ್‌ 8ರಂದು ನಡೆಯುವ ಈಶಾನ್ಯ ಪದವೀಧರ ಮತಕ್ಷೇತ್ರ ಚುನಾವಣೆಗೆ ಸ್ಪರ್ಧಿಸಲು ಸೋಮವಾರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಡಾ| ಚಂದ್ರಶೇಖರ ಪಾಟೀಲ ಹುಮನಾಬಾದ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ, ಯೋಗಿತಾ ಸಿ.ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ವಿದ್ಯಾರ್ಥಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಈರಣ್ಣಾ ಝಳಕಿ ಮುಂತಾದವರಿದ್ದರು.

Advertisement

ಪಕ್ಷದ ನಾಯಕರು ವಿಶ್ವಾಸವಿಟ್ಟು ತಮಗೆ ಟಿಕೆಟ್‌ ನೀಡಿದ್ದು, ಈಗಾಗಲೇ ಕ್ಷೇತ್ರದಾದ್ಯಂತ ಎರಡ್ಮರೂ ಸುತ್ತು ಹಾಕಲಾಗಿದೆ. ಪದವೀಧರರ ಸಮಸ್ಯೆಗೆ ಸ್ಪಂದಿಸಲು ತಮ್ಮದೆ ಆದ ಕಾರ್ಯಸೂಚಿ ರೂಪಿಸಲಾಗಿದೆ. ಅಲ್ಲದೇ ಗೆಲ್ಲುವ ವಿಶ್ವಾಸ ಹೊಂದಲಾಗಿದೆ ಎಂದು ನಾಮಪತ್ರ ಸಲ್ಲಿಕೆ ನಂತರ ಡಾ| ಚಂದ್ರಶೇಖರ ಪಾಟೀಲ ತಿಳಿಸಿದರು.

ಜೆಡಿಎಸ್‌ ಅಭ್ಯರ್ಥಿ: ಜೆಡಿಎಸ್‌ ಅಭ್ಯರ್ಥಿಯಾಗಿ ಬಳ್ಳಾರಿಯ ಎನ್‌. ಪ್ರತಾಪ ರೆಡ್ಡಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.

ಸಾರ್ವಜನಿಕ ಉದ್ಯಾನವನದಲ್ಲಿರುವ ಪಕ್ಷದ ಕಚೇರಿಯಿಂದ ಮೆರವಣಿಗೆ ಹಾಗೂ ಪಾದಯಾತ್ರೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ವಿಶ್ವನಾಥ ನಾಡಗೌಡ, ದೇವೇಗೌಡ ತೆಲ್ಲೂರ, ಶಾಮರಾವ ಸೂರನ, ಮನೋಹರ ಪೋದ್ದಾರ, ಚಾಂದಾಪಾಶಾ ಜಮಾದಾರ, ಭವಾನಿಕುಮಾರ ವಳಕೇರಿ ಮುಂತಾದವರಿದ್ದರು. ನಂತರ ಮಾತನಾಡಿದ ಅವರು, ಯುವಕರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿಸುವುದಾಗಿ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರೆಲ್ಲ ಪಕ್ಷದ ಕಡೆ ಒಲವು ಹೊಂದಿರುವುದರಿಂದ ತಮ್ಮ ಗೆಲುವು ಸುಲಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಶನಿವಾರ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಉದ್ಯಮಿ ಕೆ.ಬಿ. ಶ್ರೀನಿವಾಸ ನಾಮಪತ್ರ ಸಲ್ಲಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next