ಬೀದರ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ಏರುತ್ತಿದ್ದರೇ, ಮತ್ತೊಂದೆಡೆ ಅಭ್ಯರ್ಥಿ ಪರ ಮತಕ್ಕಾಗಿ ಕುದರೆ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪಕ್ಷದ ಮುಖಂಡರು ಮತದಾರರಿಗೆ ಹಣದ ಆಮಿಷವೊಡ್ಡಿದ್ದಾರೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಮುಖರು ಗ್ರಾ.ಪಂ ಸದಸ್ಯರ ಸಭೆ ನಡೆಸಿದ್ದರು. ತಮ್ಮ ಪಕ್ಷಕ್ಕೆ ಬೆಂಬಲಿಸುವವರಿಗೆ ಹೆಚ್ಚಿನ ಹಣ ನೀಡುವ ಕುರಿತು ಸಭೆಯಲ್ಲಿದ್ದ ಸದಸ್ಯರಿಗೆ ಭರವಸೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದು ಮತಕ್ಕೆ ಬಿಜೆಪಿಯಿಂದ ಈಗಾಗಲೇ ಮತದಾರರಿಗೆ 10 ಸಾವಿರ ರೂ. ಹಣ ನೀಡುತ್ತಿದ್ದಾರೆ. ಆದರೆ, ನಾವು ಪ್ರತಿಯೊಬ್ಬರಿಗೆ ತಲಾ 20 ಸಾವಿರ ರೂ. ಮುಂಗಡವಾಗಿ ನೀಡಲು ಬಂದಿದ್ದೇವೆ. ಮುಂದೆ ಬಿಜೆಪಿಯವರು ಎಷ್ಟು ಕೊಡ್ತಾರೆಯೋ ಅದಕ್ಕಿಂತಲೂ ಹೆಚ್ಚಿಗೆ ಹಣವನ್ನು ನಾವು ನಿಮಗೆ ಕೊಡುತ್ತೇವೆ. ಅವರು 50 ಸಾವಿರ ಕೊಟ್ಟಲ್ಲಿ ನಾವು 60 ಸಾವಿರ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಮತದಾರರಿಗೆ ಆಮಿಷವೊಡ್ಡಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ್ ದೇವಪ್ಪ, ಶಿವರಾಜ ನರಶೆಟ್ಟಿ ಸೇರಿದಂತೆ ಪ್ರಮುಖರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್
ಪರಿಷತ್ ಚುನಾವಣೆ ಪ್ರಚಾರ ಆರಂಭವಾಗುತ್ತಿದ್ದಂತೆ ದಿನದಿಂದಲೇ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ಬಹಿರಂಗವಾಗಿಯೇ ಹಣ ಹಂಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿರುವ ಮಧ್ಯ ಈಗ ಕೈ ನಾಯಕರ ಆಮಿಷದ ವಿಡಿಯೋ ವೈರಲ್ ಆಗಿದೆ. ಚುನಾವಣಾ ಆಯೋಗ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.