ಡಲ್ಲಾಸ್: ಮೇಜರ್ ಲೀಗ್ ಕ್ರಿಕೆಟ್ 2024ರ (MLC 2024)ಫೈನಲ್ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ (San Francisco Unicorns) ತಂಡವನ್ನು 96 ರನ್ ಗಳ ಅಂತರದಿಂದ ಸೋಲಿಸಿದ ಸ್ವೀವ್ ಸ್ಮಿತ್ ನಾಯಕತ್ವದ ವಾಷಿಂಗ್ಟನ್ ಫ್ರೀಡಂ (Washington Freedom) ತಂಡವು ಚಾಂಪಿಯನ್ ಆಗಿದೆ. ಸ್ಟೀವ್ ಸ್ಮಿತ್ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಆಲ್ ರೌಂಡ್ ಬೌಲಿಂಗ್ ನೆರವಿನಿಂದ ವಾಷಿಂಗ್ಟನ್ ಫ್ರೀಡಂ ಗೆಲುವು ಸಾಧಿಸಿತು.
ಡಲ್ಲಾಸ್ ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ತಂಡವು 5 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದರೆ, ಸ್ಯಾನ್ ಫ್ರಾನ್ಸಿಸ್ಕೊ ತಂಡವು ಕೇವಲ 111 ರನ್ ಗಳಿಗೆ ಆಲೌಟಾಯಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ವಾಷಿಂಗ್ಟನ್ ತಂಡಕ್ಕೆ ಸ್ಮಿತ್ ಆಧಾರವಾದರು. ನಾಯಕನಾಟವಾಡಿದ ಸ್ಮಿತ್ 52 ಎಸೆತಗಳಿಂದ 88 ರನ್ ಚಚ್ಚಿದರು. ಗ್ಲೆನ್ ಮ್ಯಾಕ್ಸವೆಲ್ 22 ಎಸೆತಗಳಲ್ಲಿ 40 ರನ್ ಮಾಡಿದರು. ಸ್ಯಾನ್ ಫ್ರಾನ್ಸಿಸ್ಕೊ ಪರ ಕಮಿನ್ಸ್ ಎರಡು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ್ದ ಯುನಿಕಾರ್ನ್ಸ್ ಸತತ ವಿಕೆಟ್ ಕಳೆದುಕೊಂಡಿತು. ಬೌಲರ್ ಕಾರ್ಮಿ ಲೆ ರೌಕ್ಸ್ 20 ರನ್ ಗಳಿಸಿದ್ದೆ ಹೆಚ್ಚಿನ ಸ್ಕೋರ್. ಉಳಿದಂತೆ ಇಂಗ್ಲಿಸ್ 18 ರನ್ ಮಾಡಿದರು. ಯಾವೊಬ್ಬ ಬ್ಯಾಟರ್ ಕೂಡಾ ಕ್ರೀಸ್ ಕಚ್ಚಿ ನಿಲ್ಲುವ ಧೈರ್ಯ ತೋರಲಿಲ್ಲ.
ವಾಷಿಂಗ್ಟನ್ ಪರ ಮಾರ್ಕೊ ಯೆನ್ಸನ್ ಮತ್ತು ರಚಿನ್ ರವೀಂದ್ರ ತಲಾ ಮೂರು ವಿಕೆಟ್ ಪಡೆದರು. ಟೈ ಎರಡು ವಿಕೆಟ್ ಕಿತ್ತರೆ, ಸೌರಭ್ ನೇತ್ರಾವಲ್ಕರ್ ಮತ್ತು ಮ್ಯಾಕ್ಸವೆಲ್ ತಲಾ ಒಂದು ವಿಕೆಟ್ ಪಡೆದರು.
ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟ್ರಾವಿಸ್ ಹೆಡ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.