Advertisement

ಶಾಸಕರೇ, ಈ ಶಾಲೆ ಅವಸ್ಥೆ ಕಣ್ತೆರೆದು ನೋಡಿ

12:12 PM Jun 10, 2019 | Suhan S |

ಕುದೂರು: ಶೈಕ್ಷಣಿಕ ವರ್ಷಾಂಭದಲ್ಲೇ ಗ್ರಾಪಂ ಮತ್ತು ಶಿಕ್ಷಣ ಇಲಾಖೆ ಅಸಡ್ಡೆಯಿಂದ ಶಾಲಾ , ಕಾಲೇಜು ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭೀತಿ ಎದುರಾಗಿದೆ.

Advertisement

ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಸಿರು ತಳಿರು ತೋರಣಗಳನ್ನು ಕಟ್ಟಿ ಮಕ್ಕಳಿಗೆ ಸಿಹಿ ಊಟ ಬಡಿಸಿ ಸ್ವಾಗತಿಸಿದರೆ ಕುದೂರಿನ ಕರ್ನಾಟಕ ಪಬ್ಲಿಕ್‌ ಶಾಲೆ ಇದಕ್ಕೆ ಅಪವಾದದಂತಿದೆ. ಶಾಲೆಯ ಅಂಗಳ ಮಳೆ ಬಂತೆಂದರೆ ಕೆರೆಯತಾಗುತ್ತದೆ. ಇದರಲ್ಲಿ ಜಡ ಸಸ್ಯಗಳು ಬೆಳೆದು ಕಸಕಡ್ಡಿ ಕೊಳೆತು ದುರ್ನಾತ ಬೀರುತ್ತದೆ.

ಸಮಸ್ಯೆ: ಕುದೂರಿನ ಕರ್ನಾಟಕ ಪಬ್ಲಿಕ್‌ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮಳೆ ಬಂತೆಂದರೆ ಕೆಸರುಗದ್ದೆಯಂತಾಗುತ್ತದೆ. ಇದರಲ್ಲಿ ಬೇಡದ ಗಿಡಗಂಟಿಗಳು ಬೆಳೆದು ಕೊಳೆತು ದುರ್ನಾತ ಬೀರುತ್ತಿವೆ.

ಕೊಳೆತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಜೊತೆಗೆ ವಿಷಪೂರಿತ ಜಂತುಹುಳುಗಳು ಕಾಣಿಸಿಕೊಳ್ಳುತ್ತಿವೆ. ಇಷ್ಟೆಲ್ಲಾ ಅವಾಂತರವಿದ್ದರೂ ಸೂಕ್ತ ಚರಂಡಿ ನಿರ್ಮಿಸಿ ಶಾಲಾ ಆವರಣ ಸ್ವಚ್ಛಗೊಳಿಸಬೇಕು ಎನ್ನುವ ಮನಸ್ಥಿತಿ ಗ್ರಾಪಂಗೆ ಇಲ್ಲವಾಗಿದೆ. ಇದರಿಂದಾಗಿ ಶಾಲಾ ಮಕ್ಕಳು ಅನಾರೋಗ್ಯದ ಭೀತಿ ಎದುರಿಸುವಂತಾಗಿದೆ.

ಚರಂಡಿ ಸಮಸ್ಯೆ: ಶಾಲೆ ಆವರಣದಲ್ಲಿ ಚರಂಡಿ ಅವ್ಯವಸ್ಥೆಯಾಗಿದೆ. ಇದನ್ನು ಸರಿಪಡಿಸಬೇಕಾದದ್ದು ಗ್ರಾಪಂ ಕರ್ತವ್ಯ. ಆದರೆ ಗ್ರಾಪಂ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಉಪನ್ಯಾಸಕರು ತಮ್ಮ ಕೈಲಾಗುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಆದರೆ. ಮೈದಾನ ಸಮತಟ್ಟು, ಚರಂಡಿ ಸಮಸ್ಯೆ ಮುಂತಾದವುಗಳನ್ನು ಉನ್ನತ ಮಟ್ಟದಲ್ಲಿ ಕೈಗೊಳ್ಳುವ ಕಾರ್ಯ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಪಂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಕಾಲೇಜು ಸಿಬ್ಬಂದಿ ಮನವಿ ಮಾಡಿದ್ದಾರೆ,

Advertisement

ಕ್ರೀಡೆಗೂ ಹಿನ್ನಡೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದು ಅವರಿಗೆ ಸೂಕ್ತ ತರಬೇತಿ ಅವಶ್ಯಕತೆಯಿದೆ. ಸರಿಯಾಗಿ ನಿರ್ವಹಣೆ ಕಾಣದ ಮೈದಾನದಿಂದ ಕ್ರೀಡಾ ಚಟುವಟಿಕೆಗೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗದೆ ಕಮರಿ ಹೋಗುತ್ತಿದ್ದಾರೆ. ಮಳೆ ಬಂದರೆ ನೀರು ತುಂಬಿ ಕೆರೆಯಂತೆ ಮಾರ್ಪಾಡಾಗುತ್ತದೆ. ಇದರಿಂದ ಮೈದಾನದಲ್ಲಿ ಕ್ರೀಡಾಭ್ಯಾಸ ಹೇಗೆ ಸಾಧ್ಯ ಎಂಬುದು ಕ್ರೀಡಾಭಿಮಾನಿಗಳ ಪ್ರಶ್ನೆಯಾಗಿದೆ.

ಶಾಸಕರಿಗೆ ಪುನರ್ಜನ್ಮ ನೀಡಿದ ಕ್ಷೇತ್ರವೇ ನಿರ್ಲಕ್ಷ್ಯ:

ಜಿಪಂ ಮತ್ತು ಶಾಸಕರಾಗಿ ಎ.ಮಂಜುನಾಥ್‌ ಅವರು ಗೆಲುವು ಸಾಧಿಸಲು ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರ ಕುದೂರು. ಹೋಬಳಿ ಕೇಂದ್ರದ ಸರ್ಕಾರಿ ಪಬ್ಲಿಕ್‌ ಶಾಲೆಯಲ್ಲೇ ಇಂತಹ ಪರಿಸ್ಥತಿ ಇದ್ದರೂ ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಮಳೆ ಬಂತೆಂದರೆ ಕಾಲೇಜಿಗೆ ಬರಲು ಮುಜುಗರವಾಗುತ್ತದೆ. ಈ ಕಾಲೇಜಿಗೆ ಏಕಾದರೂ ಸೇರಿಕೊಂಡೆವೂ ಎಂಬ ಭಾವನೆ ಮೂಡುತ್ತದೆ. ಅತ್ತ ಇಲಾಖೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ, ಇತ್ತ ಗ್ರಾಪಂ ಚರಂಡಿ ನಿರ್ಮಾಣದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ. ಶಾಸಕರು ನಮ್ಮ ಕಾಲೇಜಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ ಎಂದು ‘ಉದಯವಾಣಿ’ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಕಾಲೇಜಿನ ಆವರಣದಲ್ಲಿ ಮಳೆ ಬಂತೆಂದರೆ ನೀರು ನಿಂತುಕೊಳ್ಳುವ ಬಗ್ಗೆ ಇಲಾಖೆಗೆ ಲಿಖೀತ ರೂಪದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಜಿಪಂ ಸಭೆಯಲ್ಲೂ ಚರ್ಚಿಸಿದ್ದೇವೆ. ಗ್ರಾಪಂ ಅಧ್ಯಕ್ಷರು- ಸದಸ್ಯರಿಗೂ ವಸ್ತು ಸ್ಥಿತಿ ಬಗ್ಗೆ ತಿಳಿದಿದೆ. ಆದರೂ ಜನಪ್ರತಿನಿಧಿಗಳು ಮಾತ್ರ ಈ ಕಾಲೇಜಿಗೂ ನಮಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ●ಕಾಂತರಾಜು, ಪ್ರಾಂಶುಪಾಲರು
ಕಾಲೇಜಿನ ಆವರಣ ಮನಸ್ಸಿಗೆ ಮುದ ನೀಡುವಂತಿರಬೇಕು. ಆದರೆ, ನಿಜಕ್ಕೂ ಬೇಸರ ತರಿಸುತ್ತದೆ. ಇಂತಹ ವಾತಾವರಣದಲ್ಲಿ ಮಕ್ಕಳಿಂದ ಶೈಕ್ಷಣಿಕ ಸಾಧನೆ ನಿರೀಕ್ಷಿಸುವುದಾದರೂ ಹೇಗೆ . ಇಲಾಖೆ ಈ ರೀತಿಯ ಬೇಜವಾಬ್ದಾರಿತನ ಸಾರ್ವಜನಿಕರಲ್ಲಿ ಬೇಸರವನ್ನುಂಟು ಮಾಡಿದೆ. ● ರಾಘವೇಂದ್ರ, ಹಳೆ ವಿದ್ಯಾರ್ಥಿ
● ಕೆ.ಎಸ್‌.ಮಂಜುನಾಥ್‌ ಕುದೂರು
Advertisement

Udayavani is now on Telegram. Click here to join our channel and stay updated with the latest news.

Next