ಬೆಂಗಳೂರು: ಆಷಾಢ ಮುಗಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್ ಕೋಟಾದಡಿ ಖಾಲಿ ಇರುವ ಆರು ಸ್ಥಾನಗಳಿಗೆ ತೀವ್ರ ಪೈಪೋಟಿ ಆರಂಭವಾಗಿದೆ.
ಸಂಪುಟ ಸೇರಲು ಅನೇಕ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಗೆ ಮುನ್ನವೇ ಕೆಲವು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಸಮಾಧಾನಪಡಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಆದರೆ, ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಸಂಪುಟದಲ್ಲಿ ಸ್ಥಾನ ನೀಡಿ ಎಂದು ಎರಡು ಹಾಗೂ ಮೂರನೇ ಬಾರಿ ಗೆದ್ದಿರುವ ಶಾಸಕರು ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಬಿ.ಕೆ. ಸಂಗಮೇಶ್, ಡಾ. ಸುಧಾಕರ್, ಎಂ.ಟಿ.ಬಿ. ನಾಗರಾಜ್, ಭೀಮಾನಾಯ್ಕ, ನಾಗೇಂದ್ರ, ಎಸ್.ಟಿ. ಸೋಮಶೇಖರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿಯೂ ತಮ್ಮ ಬೇಡಿಕೆ ಇಟ್ಟಿದ್ದಾರೆ.
ಈಗಾಗಲೇ ಮೊದಲ ಹಂತದಲ್ಲಿ ಸಚಿವ ಸ್ಥಾನ ವಂಚಿತ ಅನೇಕ ಹಿರಿಯ ಶಾಸಕರನ್ನು ಸಮಾಧಾನ ಪಡಿಸಲು ಪಕ್ಷದ ಹೈಕಮಾಂಡ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದು. ಮೊದಲ ಹಂತದಲ್ಲಿ ಅವಕಾಶ ವಂಚಿತ ಜಾತಿ, ಪ್ರಾದೇಶಿಕವಾರು ಪ್ರಾತಿನಿಧ್ಯ ಹಾಗೂ ಹಿರಿತನದ ಆಧಾರದ ಮೇಲೆ ಆರು ಜನರನ್ನು ಭರ್ತಿ ಮಾಡಿಕೊಳ್ಳಲು ಹೈ ಕಮಾಂಡ್ ನಿರ್ಧರಿಸಿದೆ. ಕೆಲವು ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವ ಸಾಧ್ಯತೆಯೂ ಇದೆ.
ಸಂಪುಟ ಸೇರುವ ಸಂಬಂಧ ಶಾಸಕರ ಒತ್ತಡ ಹೆಚ್ಚಾದರೆ ಸಂಪುಟ ವಿಸ್ತರಣೆಯೂ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.