Advertisement

ಶಾಸಕರ ಮಾರಾಮಾರಿ: ಪಕ್ಷಗಳ ಜಾಣ್ಮೆ ನಡೆ

01:23 AM Jan 24, 2019 | |

ಬೆಂಗಳೂರು: ಈಗಲ್ಟನ್‌ ರೆಸಾರ್ಟ್‌ನಲ್ಲಿ ಶಾಸಕರ ಮಾರಾಮಾರಿ ಪ್ರಕರಣ ಒಂದೆಡೆ ವಿವಾದವಾಗಿದ್ದರೆ, ಮತ್ತೂಂದೆಡೆ ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಲಾಭದ ದೃಷ್ಟಿಯಿಂದ ಹೇಳಿಕೆಗಳನ್ನು ನೀಡುತ್ತಿವೆ.

Advertisement

ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿಯ ಸಿ.ಟಿ.ರವಿ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ಆನಂದ್‌ಸಿಂಗ್‌ ಆರೋಗ್ಯ ವಿಚಾರಿಸಿ, ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಸಂಖ್ಯಾಬಲದ ದೃಷ್ಟಿಯಿಂದ ಇಬ್ಬರನ್ನೂ ಕಳೆದುಕೊಳ್ಳದಂತೆ ಜಾಣ್ಮೆ ಹೆಜ್ಜೆ ಇಡುತ್ತಿದೆ. ಈ ಮಧ್ಯೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್‌ಸಿಂಗ್‌ ಅವರ ಪುತ್ರ ಸಿದ್ದಾರ್ಥ್ ಸಿಂಗ್‌, ಆಸ್ಪತ್ರೆಗೆ ಭೇಟಿ ನೀಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆಯವರಿಗೆ ಬಲಗಣ್ಣಿನ ಕೆಳಭಾಗದಲ್ಲಿ ಗಂಭೀರ ಗಾಯವಾಗಿದ್ದು, ಹೊಟ್ಟೆಯ ಕೆಳ ಭಾಗದಲ್ಲಿ ಎರಡು ರಿಬ್ಸ್ಗಳು ಮುರಿದಿವೆ. ಎದ್ದು ಓಡಾಡಲು ಆಗುತ್ತಿಲ್ಲ. ನಡೆದಾಡಲು ಪ್ರಯತ್ನಿಸಿದರೆ, ತಲೆ ಸುತ್ತು ಹಾಗೂ ವಾಂತಿಯಾಗುತ್ತಿದೆ. ಕೆಮ್ಮು ಹಾಗೂ ಉಸಿರಾಟ ಮಾಡುವ ಸಂದರ್ಭದಲ್ಲಿ ತೊಂದರೆ ಆಗುತ್ತಿದೆ. ಇನ್ನೂ ಐದಾರು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.

ರೆಸಾರ್ಟ್‌ನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಕಂಪ್ಲಿ ಶಾಸಕ ಗಣೇಶ್‌ ಕುಟುಂಬದವರು ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ನಮ್ಮ ತಂದೆ ಹೊಡೆತ ತಿಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಏನೂ ಆಗಿಲ್ಲ ಎಂದು ಹೇಗೆ ಹೇಳುತ್ತಾರೆ?. ಶಾಸಕ ಗ‌ಣೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯ ಪಕ್ಷದ ತೀರ್ಮಾನ. ಆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.

ಸರ್ಕಾರದ ವರ್ಚಸ್ಸಿಗೆ ಧಕ್ಕೆ: ವಿಶ್ವನಾಥ್‌

Advertisement

ಬೆಂಗಳೂರು: ಈಗಲ್ಟನ್‌ ರೆಸಾರ್ಟ್‌ನಲ್ಲಿ ಇಬ್ಬರು ಶಾಸಕರ ಮಾರಾಮಾರಿಯಿಂದ ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಬಿಹಾರವಾಗುತ್ತಿದೆಯಾ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಪ್ರಕರಣದಿಂದ ಮೈತ್ರಿ ಪಕ್ಷ ಜೆಡಿಎಸ್‌ಗೆ ಮುಜುಗರ ಉಂಟಾಗಿರುವುದು ಹೌದು. ಆದಷ್ಟು ಬೇಗ ಶಾಸಕ ಗಣೇಶ್‌ ಅವರನ್ನು ಬಂಧಿಸಬೇಕು ಎಂದು ತಿಳಿಸಿದರು. ಗಣೇಶ್‌ ಬಂಧನಕ್ಕೆ ಮೂರು ತಂಡ ರಚಿಸಲಾಗಿದೆ ಎಂಬ ಮಾಹಿತಿ ಇದೆ. ಪೊಲೀಸರ ಕೈಗೆ ಸಿಗದೆ ಎಲ್ಲಿ ಹೋಗಲು ಸಾಧ್ಯ? ಆಗ ಇಂದಿರಾಗಾಂಧಿಯವರನ್ನೇ ಬಂಧಿಸಲಾಗಿತ್ತು. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಗಣೇಶ್‌ ಯಾವ ಲೆಕ್ಕ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next