ಚಿಕ್ಕಮಗಳೂರು: ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಭಾರೀ ಮನೆಗಳಿಗೆ ಹಾನಿಯಾಗಿದ್ದು, ಸ್ಥಳಾಂತರಗೊಂಡು ಮನೆ ನಿರ್ಮಿಸಿಕೊಳ್ಳಬೇಕಿದ್ದ
ನಿರಾಶ್ರಿತರು ಸರ್ಕಾರದ 1 ಲಕ್ಷ ರೂ. ಪರಿಹಾರ ಪಡೆದು ಈಗ ಬೇರೆಡೆ ಸ್ಥಳಾಂತರಗೊಳ್ಳಲು ಒಪ್ಪುತ್ತಿಲ್ಲ. ಅಂತಹವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ
ಕೈಗೊಂಡು ಸ್ಥಳಾಂತರ ಮಾಡಬೇಕೆಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಒತ್ತಾಯಿಸಿದರು. ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ
ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಾರೀ ಅತಿವೃಷ್ಟಿ
ಸಂಭವಿಸಿದಾಗ ನಿರಾಶ್ರಿತರಿಗೆ ಸರ್ಕಾರ ಪರಿಹಾರ ನೀಡುತ್ತಿರಬೇಕಾಗುತ್ತದೆ. ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಕೆ.ಕುಮಾರ್ ಅತಿವೃಷ್ಟಿ ಪರಿಹಾರ ಮಾಹಿತಿ ನೀಡಿ, ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಮೂಡಿಗೆರೆ ತಾಲೂಕಿನಲ್ಲಿ
ಸಂಭವಿಸಿದ ಭೂ ಕುಸಿತ, ಹಾನಿಯಾದ ಮನೆಗಳ ಪೈಕಿ 133 ಮಂದಿಗೆ ಮನೆ ನಿರ್ಮಾಣಕ್ಕೆ ತಲಾ 1ಲಕ್ಷ ರೂ. ಪರಿಹಾರ ನೀಡಲಾಗಿದೆ. ಸಂತ್ರಸ್ತರನ್ನು ಬೇರೆಡೆಗೆ
ಸ್ಥಳಾಂತರ ಮಾಡಬೇಕಿದ್ದು, ಸಂತ್ರಸ್ತರು ಮೊದಲು ಒಪ್ಪಿಗೆ ಸೂಚಿಸಿದ್ದರು. ಪರಿಹಾರ ಪಡೆದ ನಂತರ ಒಪ್ಪದೇ ಅಲ್ಲೇ ಇರಲು ನಿರ್ಧರಿಸಿದ್ದಾರೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 133 ಮನೆ ಮಾಲೀಕರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬೇರೆಡೆ ನಿವೇಶನ ಕಲ್ಪಿಸಿ ಮನೆ ನಿರ್ಮಿಸಿಕೊಡಬೇಕು. ಜಿಲ್ಲೆಯಲ್ಲಿ ಈ ಸಾಲಿನಲ್ಲೂ ಭಾರೀ ಮಳೆಯಾಗುವ ಸೂಚನೆ ಇದ್ದು, ಕಳೆದ ವರ್ಷ ಸಂಭವಿಸಿದ ಭೂ ಕುಸಿತ ಜಾಗದಲ್ಲಿ ಮತ್ತೆ ಭೂ ಕುಸಿತ ಉಂಟಾದರೇ ಅವರಿಗೆ ಸರ್ಕಾರ ಮತ್ತೆ ಪರಿಹಾರ ನೀಡಬೇಕಾಗುತ್ತದೆ. ಪದೇ ಪದೇ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ಕಲ್ಪಿಸಿದರೆ ಸಮಸ್ಯೆ ಮರುಕಳಿಸುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾತನಾಡಿ, ಮನೆ ಕಳೆದುಕೊಂಡ ನಿರಾಶ್ರಿತರು ಸ್ಥಳಾಂತರಕ್ಕೆ ಒಪ್ಪಿ ಅಫಿಡವಿಟ್ ನೀಡಿದ್ದಾರೆ. 1 ಲಕ್ಷ ಪರಿಹಾರ ಪಡೆದ ಬಳಿಕ ಹಾನಿಯಾದ ಮನೆಗಳನ್ನು ದುರಸ್ತಿ ಮಾಡಿಕೊಂಡು ಅಲ್ಲೇ ಇರುತ್ತೇವೆ ಎನ್ನುತ್ತಿದ್ದಾರೆ ಎಂದರು.
ಮೂಡಿಗೆರೆ ತಾಪಂ ಅಧ್ಯಕ್ಷ ರತನ್ ಮಾತನಾಡಿ, ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅಲ್ಪಸ್ವಲ್ಪ ಜಮೀನು ಇದೆ. ಬೇರೆಡೆ ನಿವೇಶನ ನೀಡಿ ಸ್ಥಳಾಂತರಕ್ಕೆ ಮುಂದಾಗಿರುವುದರಿಂದ ಅವರು ಬೇರೆಡೆ ಹೋಗಲು ಒಪ್ಪುತ್ತಿಲ್ಲ, ನಿವೇಶನದೊಂದಿಗೆ ಜಮೀನು ನೀಡಿದರೆ ಸ್ಥಳಾಂತರಗೊಳ್ಳುತ್ತಾರೆ ಎಂದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ಸಾಲಿನಲ್ಲಿ ಸಂತ್ರಸ್ತರ ಮನೆಗಳಿರುವಲ್ಲಿ ಭೂ ಕುಸಿತ ಸಂಭವಿಸಿದರೆ ಪರಿಹಾರ ನೀಡದೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ಅವರಿಗೆ ಸೂಚಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಶಾಲಾ ಮಕ್ಕಳ ಸಂಖ್ಯೆಗನುಗುಣವಾಗಿ ಎಷ್ಟು ಶಾಲೆಗಳಿಗೆ ಶೌಚಾಲಯಗಳ ಅಗತ್ಯವಿದೆ ಎಂಬುದನ್ನು ಬಿಇಒಗಳಿಂದ ಮಾಹಿತಿ ತರಿಸಿಕೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಅಗತ್ಯ ಇರುವ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ ಎಂದು ಅಧಿ ಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಪಂ ಸಿಇಒ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಇದ್ದರು.