ಕಲಬುರಗಿ : ರಾಜ್ಯದಲ್ಲಿ ಆಪರೇಷನ್ ಕಮಲ ಪಾರ್ಟ್ 2 ಇಲ್ಲ. ತಾನಾಗಿಯೇ ಹಲವು ಶಾಸಕರು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತ, ಬಿಜೆಪಿ ಸರಕಾರದ ಮೆಚ್ಚಿ ಬರ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಎಲ್ಲಾ ಪಾರ್ಟಿ ಕ್ಲೀನ್ ಆಗಿದೆ. ಬಹುತೇಕ ಶಾಸಕರು ಸ್ವಯಂ ಪ್ರೇರಿತರಾಗಿ ನಿರ್ಧಾರ ತಗೋತಿದ್ದಾರೆ. ಕರ್ನಾಟಕದಲ್ಲಿ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತೆ ನೋಡಿ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಶಾಸಕರು ಬಿಜೆಪಿಗೆ ಸೇರುತ್ತಾರೆಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಉಮೇಶ್ ಜಾಧವ್ ಮಾತನಾಡಿದರು.
ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಅಹ್ವಾನ ನೀಡಲಾಗುವುದು. ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಿಎಂ ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದರು. ಈಗ ಅವರ ನೇತೃತ್ವದಲ್ಲಿಯೇ ನಿಲ್ದಾಣ ಶುಭಾರಂಭಗೊಳ್ಳುತ್ತಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಮಾತನಾಡಿದ ಅವರು ಈಗಾಗಲೇ ವಿಮಾನ ನಿಲ್ದಾಣ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕೆಲಸಗಳು ಭರದಿಂದ ಸಾಗಿವೆ ಎಂದರು.
ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಆರಂಭಕ್ಕೆ ಶಕ್ತಿ ಮೀರಿ ಶ್ರಮಿಸಲಾಗುವುದು. ಒಂದು ವೇಳೆ ಆಗದಿದ್ದರೆ ಪರಿಣಾಮವೇ ಬೇರೆ ಇರುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ ಸಂಸದರು, ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭದ ಕಾರ್ಯ ಯಾವ ಹಂತದಲ್ಲಿದೆ ಎಂಬುದು ಎರಡು ಮೂರು ದಿನದೊಳಗೆ ಗೊತ್ತಾಗುತ್ತದೆ. ರೈಲ್ವೆ ವಿಭಾಗೀಯ ಕಚೇರಿ ಕಲಬುರಗಿಯಲ್ಲಿ ಪ್ರಾರಂಭವಾಗುತ್ತದೆ. ಆದರೆ ಯಾವಾಗ ಎಂಬ ಸಮಯ ಹೇಳಲಿಕ್ಕಾಗದು ಎಂದರು.
17ರಂದು ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಧ್ವಜಾರೋಹಣ ನೆರವೇರಿಸುವರು ಎಂದು ಸಂಸದ ಡಾ. ಜಾಧವ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪ ಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಉಪಸ್ಥಿತರಿದ್ದರು.