ಎಚ್.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರು ದೂರು ನೀಡಿದ್ದ ಹಿನ್ನೆ°ಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಶಾಲೆಗೆ ದಿಢೀರ್ ಭೇಟಿ ನೀಡಿ ಶಿಕ್ಷಕರನ್ನು ತರಾಟೆ ತಗೆದುಕೊಂಡರು.
ಶಾಲೆಯಲ್ಲಿ ಐವರು ಶಿಕ್ಷಕರು ನಿಯೋಜನೆಗೊಂಡಿದ್ದರೂ, ಪ್ರತಿದಿನ ಇಬ್ಬರು ಅಥವಾ ಮೂವರು ಶಿಕ್ಷಕರು ಗೈರಾಗುತ್ತಿರುವುದನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಶಾಸಕ ಭೇಟಿ ವೇಳೆಯೂ ಇಬ್ಬರು ಶಿಕ್ಷಕರು ಗೈರಾಗಿರುವುದನ್ನು ಕಂಡ ಅನಿಲ್‌ಚಿಕ್ಕಮಾದು, “ಹಾಜರಾತಿ ಪುಸ್ತಕ ತನ್ನಿ, ಇಬ್ಬರು ಶಿಕ್ಷಕರು ಏಕೆ ಬಂದಿಲ್ಲ. ಅವರು ಅನುಮತಿ ಪಡೆದಿದ್ದಾರೆಯೇ, ಪತ್ರ ಇದ್ದರೇ ಕೊಡಿ’ ಎಂದು ತಾಕೀತು ಮಾಡಿದರು, ಇದಕ್ಕೆ ಉತ್ತರಿಸಲಾಗದೆ ತಡವರಿಸಿದ್ದಕ್ಕೆ ಶಿಕ್ಷಕರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಶಾಸಕರು ಮಾತನಾಡಿ, ಬೀಚನಹಳ್ಳಿ ಶಾಲೆ ಹಿಂದಿನಿಂದಲೂ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಹಿಂದೆ ಇದ್ದಂತಹ ಶಿಕ್ಷಕರು ಪಾಠ ಬೋಧಿಸುವುದರ ಮೂಲಕ ಈ ಶಾಲೆಯನ್ನು ತಾಲೂಕಿನಲ್ಲಿಯೇ ಮಾದರಿ ಶಾಲೆಯನ್ನಾಗಿಸಿದ್ದರು. ಇಲ್ಲಿ ಕಲಿತವರು ಐಎಎಸ್, ಕೆಎಎಸ್ ಮತ್ತಿತರ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಲು ಅವಕಾಶ ಸಿಕ್ಕಿರುವುದೇ ನಿಮ್ಮ ಪುಣ್ಯ. ಶಾಲೆ ಇತಿಹಾಸಕ್ಕೆ ಧಕ್ಕೆ ಬಾರದ ಹಾಗೆ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧಿಸಿ ಎಂದು ಸೂಚಿಸಿದರು.
ಗೈರಾದರೆ ಕ್ರಮ: ನಾಳೆಯಿಂದ ಗೈರಾಗದೆ ಸಕಾಲದಲ್ಲಿ ಶಾಲೆಗೆ ಹಾಜರಾಗಬೇಕು. ನಾನು ಮತ್ತೆ ಭೇಟಿ ನೀಡುತ್ತೇನೆ. ಆಗಲೂ ನೀವು ಬೇಜವಾಬ್ದಾರಿ ವರ್ತನೆ ತೋರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ನಿಮಗೆ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾದರೆ ಬೇರೆ ತಾಲೂಕಿಗೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗೆ ಅನುದಾನ: ಇದೇ ವೇಳೆ, ಶಿಥಿಲಗೊಂಡಿರುವ ಶಾಲಾ ಕೋಠಡಿಗಳನ್ನು ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ನಾನೇ ಖುದ್ದು ಕೋಠಡಿಗಳ ಸ್ಥಿತಿಯನ್ನು ನೋಡಿದ್ದೇನೆ, ಶೀಘ್ರದಲ್ಲೇ ಅನುದಾನ ಮಂಜೂರು ಮಾಡಿ ಶಾಲೆ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಹಲಸೂರು ಶಂಭುಲಿಂಗನಾಯಕ, ಭಾಸ್ಕರ್, ಎಸ್‌ಡಿಎಂಸಿ ಸದಸ್ಯ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹೇಮಂತ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದುಕಾಂಬ್ಳಿ, ಡೇವಿಡ್, ಲೋಕೇಶ್, ರಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.