Advertisement

ಆಸ್ಪತ್ರೆಗೆ ಶಾಸಕ ದರ್ಶನಾಪುರ ಭೇಟಿ

11:36 AM Feb 27, 2022 | Team Udayavani |

ಶಹಾಪುರ: ದೋರನಹಳ್ಳಿಯ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್‌ ಸೋರಿಕೆಯಿಂದ ನಡೆದ ಅವಘಡಕ್ಕೆ ಸಂಬಂಧಿಸಿ ಶನಿವಾರ ಮತ್ತೊಂದು ಸಾವು ಸಂಭವಿಸಿದೆ. ಈ ಮೂಲಕ 23 ಗಾಯಾಳುಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

Advertisement

ಇತ್ತ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಸಿಲಿಂಡರ್‌ ಸ್ಫೋಟದಿಂದ ಬೆಂಕಿ ಹೊತ್ತಿ ಉರಿದ ಪರಿಣಾಮ ಹಾಕಲಾದ ಟೆಂಟ್‌ ಸಮೇತ ಕುರ್ಚಿಗಳು ಸುಟ್ಟು ಕರಕಲಾಗಿವೆ. ಜೊತೆಗೆ ಸುಮಾರು ಜನರಿಗೆ ಸಣ್ಣಪುಟ್ಟ ಗಾಯಗಳಾದರೆ 23 ಜನರು ತೀವ್ರ ಗಾಯಗೊಂಡಿದ್ದಾರೆ. 10 ಜನರ ಸ್ಥಿತಿ ಚಿಂತಾಜನಕವಾಗಿದೆ. ಈಗಾಗಲೇ ಅದರಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ. ಸಿಲಿಂಡರ್‌ ಸ್ಫೋಟ ದುರಂತದಿಂದಾಗಿ ಸದ್ಯ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸಂಭ್ರಮ ಸಡಗರ ಇರಬೇಕಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಶನಿವಾರ ಮತ್ತೋರ್ವ ಗಾಯಾಳು ಗಂಗಮ್ಮ (45) ಮೃತಪಟ್ಟಿದ್ದಾರೆ. ಒಟ್ಟು 23 ಜನರು ಗಾಯಗೊಂಡಿದ್ದು, 4 ಜನರು ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಯಲ್ಲಿ ಉಳಿದಿದ್ದಾರೆ. 4 ಜನರು ಮೃತಪಟ್ಟಿದ್ದು, 15 ಜನರು ಕಲ್ಬುರ್ಗಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇನ್ನೂ 5 ಜನರ ಸ್ಥಿತಿ ಗಂಭೀರವಾಗಿದೆ.

ದೋರನಹಳ್ಳಿ ಘಟನೆಯಲ್ಲಿ ಗಾಯಗೊಂಡು ಬಸವೇಶ್ವರ ಆಸ್ಪತ್ರೆಗೆ ದಾಖಲಾದ ಸಾವು ನೋವಿನ ಮಧ್ಯ ಹೋರಾಟ ನಡೆಸುತ್ತಿರುವ ಗಾಯಾಳುಗಳನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಸಚಿವ ಮಾಲಕರಡ್ಡಿ, ಶಾಸಕ ವೆಂಕಟರಡ್ಡಿ ಮುದ್ನಾಳ ಸೇರಿದಂತೆ ಯಾದಗಿರಿ ಡಿಎಚ್‌ಒ ಡಾ| ಕಾಮರಡ್ಡಿ ಭೇಟಿ ನೀಡಿ ಸಾಂತ್ವನ ಹೇಳಿದರು. ಶಾಸಕ ದರ್ಶನಾಪುರ ಗಾಯಾಳುಗಳನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಲ್ಲದೆ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next