ಬೆಂಗಳೂರು: ಜಯನಗರ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಗುರುವಾರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಗರದ ಜಯದೇವ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದಾರೆ.
ಗುರುವಾರ ಪಾದಯಾತ್ರೆ ನಡೆಸುತ್ತಿದ್ದಾಗ ದಿಢೀರ್ ಕುಸಿದು ಬಿದ್ದ ತಕ್ಷಣ ಆತಂಕಗೊಂಡ ಕಾರ್ಯಕರ್ತರು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ಹೃದಯದ ನಾಳದಲ್ಲಿ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಸ್ಟೆಂಟ್ ಅಳವಡಿಸಿದ್ದರು. ಸ್ಟೆಂಟ್ ಅಳವಡಿಸಿದ್ದರಿಂದ ಜಾಸ್ತಿ ನಡೆದಾಡ ಬಾರದು ಎಂದು ವೈದ್ಯರು ಸೂಚಿಸಿದ್ದರು. ಚುನಾವಣೆ ಪ್ರಚಾರದ ಒತ್ತಡದಲ್ಲಿ ನಿರಂತರ ಪಾದಯಾತ್ರೆ ನಡೆಸುತ್ತಿರುವುದರಿಂದ ಮತ್ತೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ.
ವಿಜಯ್‌ಕುಮಾರ್ ಅವರನ್ನು ಸಂಜೆ 7 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆತರಲಾಯಿತು. ಆ ವೇಳೆ ಹೃದಯ ಬಡಿತ, ಉಸಿರಾಟ, ರಕ್ತದೊತ್ತಡ ಏರು-ಪೇರಾಗಿತ್ತು. ತಕ್ಷಣ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡರಾದರೂ ಮತ್ತೆ ಪರಿಸ್ಥಿತಿ ಗಂಭೀರವಾಯಿತು. ಹೀಗಾಗಿ, ತೀವ್ರ ನಿಗಾಘಟಕದಲ್ಲಿ ಇರಿಸಲಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಲೇ ಜಯನಗರ ಸೇರಿದಂತೆ ಬೆಂಗಳೂರಿನ ಬಿಜೆಪಿ ನಾಯಕರು ಹಾಗೂ ಮುಖಂಡರು ಜಯದೇವ ಆಸ್ಪತ್ರೆಗೆ ಧಾವಿಸಿ ವೈದ್ಯರ ಬಳಿ ಮಾಹಿತಿ ಪಡೆದರು. ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದರು.
ವಿಜಯಕುಮಾರ್ ಅವರು ಎರಡನೇ ಬಾರಿ ಜಯನಗರ ಕ್ಷೇತ್ರ ಪ್ರತಿನಿಧಿಸಿದ್ದು ಮೂರನೇ ಬಾರಿ ಆಯ್ಕೆಯಾಗಿ ಕಣಕ್ಕಿಳಿದಿದ್ದರು. ಅನಾರೋಗ್ಯ ಲೆಕ್ಕಿಸದೆ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡುತ್ತಿದ್ದರು.