ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿಗೆ ಶುಕ್ರವಾರ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಭೇಟಿ ನೀಡಿ, ಚಿಲ್ಲರೆ ಮೀನು ವ್ಯಾಪಾರಸ್ಥರ ಪಾಸ್ ಗೊಂದಲದ ಕುರಿತಂತೆ ಮಾಹಿತಿ ಪಡೆದುಕೊಂಡರು.
ಜಿಲ್ಲಾಡಳಿತದ ನಿರ್ದೇಶನದಂತೆ ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಜನದಟ್ಟಣೆ ತಪ್ಪಿಸುವ ಸಲುವಾಗಿ ಅಗತ್ಯವಿರುವ ಮೀನುಗಾರರು, ಕಾರ್ಮಿಕರಿಗೆ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದರಿಂದ ಬೇಸತ್ತ ಚಿಲ್ಲರೆ ಮೀನು ವ್ಯಾಪಾರಸ್ಥ ಮಹಿಳೆಯರು ಶಾಸಕರಿಗೆ ದೂರು ನೀಡಿದ್ದು, ಅದರಂತೆ ಶಾಸಕರು ಭೇಟಿ ನೀಡಿ ಅಹವಾಲು ಆಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಇನ್ನು ಕೆಲ ದಿನ ಅಷ್ಟೇ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿದ್ದು, ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕೂಡ ಅವಶ್ಯಕವಾಗಿದೆ. ಹಾಗಾಗಿ ಬೋಟಿಗೆ ಒಬ್ಬರು ಮಹಿಳಾ ಮೀನು ಮಾರಾಟಗಾರರಿಗೆ ಅವಕಾಶ ಕಲ್ಪಿಸಿ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಗಂಗೊಳ್ಳಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪೊಲೀಸ್ ಠಾಣಾ ಎಸ್‌ಐ ಭೀಮಾಶಂಕರ್, ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಖಾರ್ವಿ, ಮೀನುಗಾರ ಮುಖಂಡರಾದ ರಾಮಪ್ಪ ಖಾರ್ವಿ, ಬಸವ ಖಾರ್ವಿ, ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ನಿರ್ದೇಶಕರು ಉಪಸ್ಥಿತರಿದ್ದರು.