ಬಂಗಾರಪೇಟೆ: ತಾಲೂಕು ಕಚೇರಿ ಒಳಾಂಗಣದಲ್ಲಿ ಗಣೇಶ ವಿಗ್ರಹ ಸ್ಥಾಪಿಸಿರುವುದಕ್ಕೆ ಶಾಸಕ ನಾರಾಯಣಸ್ವಾಮಿ ಅವರು ತಹಶೀಲ್ದಾರ್ ದಯಾನಂದ್ ವಿರುದ್ಧ ಮತ್ತೆ ಕೆಂಡಮಂಡಲರಾಗಿ ನಿಂದಿಸುವ ಮೂಲಕ ಇಬ್ಬರ ನಡುವೆ ಹೊಂದಾಣಿಕೆ ಸರಿಯಿಲ್ಲ ಎಂಬುದನ್ನು ಮತ್ತೂಮ್ಮೆ ಸಾಭೀತುಪಡಿಸಿದರು.
ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಸಂಬಂಧ ತಹಶೀಲ್ದಾರ್ ಗೈರಲ್ಲಿ ನಡೆದ ಪೂರ್ವಭಾವಿ ಸಭೆಗಾಗಿ ಶಾಸಕ ಎಸ್. ಎನ್.ನಾರಾಯಣ ಸ್ವಾಮಿ ಕಚೇರಿ ಒಳಗೆ ಕಾಲಿಡುತ್ತಿದ್ದಂತೆ ಒಳಾಂಗಣದಲ್ಲಿ ಹೊಸದಾಗಿ ಗಣೇಶ ವಿಗ್ರಹ ಸ್ಥಾಪಿಸಿರುವುದನ್ನು ಕಂಡು ಸಭೆಯಲ್ಲಿ ಕಚೇರಿ ಒಳಾಂಗಣದಲ್ಲಿ ಗಣೇಶ ವಿಗ್ರಹ ಸ್ಥಾಪಿಸಲು ತಹಶೀಲ್ದಾರ್ ಎಂ.ದಯಾನಂದ್‌ಗೆ ಯಾರು ಅನುಮತಿ ನೀಡಿದರು ಎಂದು ಉಪ ತಹಶೀಲ್ದಾರ್ ಮುಕ್ತಾಂಭರನ್ನು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಕಚೇರಿ ಎಲ್ಲಾ ಸಿಬ್ಬಂದಿ ತೀರ್ಮಾನದಂತೆ ಸ್ಥಾಪಿಸಲಾಗಿದೆ ಎಂಬ ಉತ್ತರದಿಂದ ಕೆರಳಿ, ಇದೆಲ್ಲಾ ತಹಶೀಲ್ದಾರ್ ಹೇಳಿಕೊಟ್ಟರಾ ಹೀಗೆ ಹೇಳಿ ಎಂದು ಮಹಿಳಾ ಅಧಿಕಾರಿ ಮೇಲೆ ಕಿಡಿಕಾರಿದ ಅವರು, ಹೇಳಿಕೊಟ್ಟಿಲ್ಲವೆಂದು ಗಣೇಶನ ಮೇಲೆ ಪ್ರಮಾಣ ಮಾಡು, ನಾನು ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸವಾಲ್ ಹಾಕಿದರು.
ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ: ತಹಶೀಲ್ದಾರ್ ಕಚೇರಿಯಲ್ಲಿ ಜನರ ಕೆಲಸಕ್ಕೆ ಲಂಚ ಪಡೆಯದೆ ಯಾವುದ ನ್ನೂ ಮಾಡಲ್ಲ. ಹಣ ಪಡೆಯಲು ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಶಾಸಕರು ಸರಿಯಿಲ್ಲ ಎಂದು ಆರೋಪಿಸುವರು, ಇವರೇನು ಪ್ರಾಮಾ ಣಿಕ ಅಧಿಕಾರಿಯೇ ಆಗಿದ್ದರೆ ಸಾರ್ವಜನಿಕ ಕೆಲಸಕ್ಕಾಗಿ ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ದೇವರ ಮೇಲೆ ಸಾರ್ವಜನಿಕವಾಗಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಅಂಬೇಡ್ಕರ್ ಭವನಕ್ಕೆ ತಹಶೀಲ್ದಾರ್ ಅಡ್ಡಿ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಹಶೀಲ್ದಾರ್ ಅಡ್ಡಿಪಡಿಸುತ್ತಿದ್ದಾರೆ. ಪ್ರಕರಣ ಕೋರ್ಟ್‌ಗೆ ಹೋಗಲು ಇವರೇ ಹಣ ನೀಡಿ, ವ್ಯಕ್ತಿಗೆ ಕುಮ್ಮಕ್ಕು ನೀಡಿದ್ದಾರೆ. ತಹಶೀಲ್ದಾರ್ ತಮ್ಮ ಕಚೇರಿಯನ್ನು ಜೆಡಿಎಸ್ ಕಚೇರಿಯಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಅಲ್ಲದೆ, ಒಂದೆಡೆ ನಾನು ಬಿಜೆಪಿ ಬೆಂಬಲಿಗ ಎಂದು ಬಿ.ಪಿ.ವೆಂಕಟಮುನಿಯಪ್ಪ ಕಾಲಿಗೆ ಬೀಳುವರು. ಮತ್ತೂಂದೆಡೆ ಜೆಡಿಎಸ್ ಬೆಂಬಲಿಗ ಎಂದು ಮಲ್ಲೇಶಬಾಬು, ಅವರ ತಾಯಿ ಮಂಗಮ್ಮ ಕಾಲಿಗೆ ಬೀಳುವರು. ಇಂತಹ ಅಧಿಕಾರಿಯನ್ನು ನಾನು ಕಂಡಿಲ್ಲ. ತಾಲೂಕಿನಲ್ಲಿ 1.80ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಅದನ್ನು ಬಿಟ್ಟು ಅಂಬೇಡ್ಕರ್ ಭವನದಲ್ಲಿ ಮಾತ್ರ ಹೆಚ್ಚಿನ ಆಸಕ್ತಿವಹಿಸಿರುವುದರ ಹಿಂದಿನ ಮರ್ಮವೇನು, ದಲಿತರೆಂದು ಹೇಳಿಕೊಂಡು ದಲಿತರಿಗೇ ವಂಚನೆ ಮಾಡುವರು ಎಂದು ತಹಶೀಲ್ದಾರ್ ವಿರುದ್ಧ ಆರೋಪಿಸಿದರು.
ಸಿಎಂ ಕಾರ್ಯದರ್ಶಿ ವಿರುದ್ಧ ಅರೋಪ: ಸಂಸದ ಎಸ್. ಮುನಿಸ್ವಾಮಿ ಬೆಂಬಲ, ಮಲ್ಲೇಶ್ ಬಾಬು ಸಂಬಂಧಿಯಾದ ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ನಿರ್ದೇಶನದಂತೆ, ತಾಲೂಕು ಆಡಳಿತ ಕಚೇರಿಯನ್ನು ಜೆಡಿಎಸ್ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ. ಜೆಡಿಎಸ್ ಪರ ಸಾರ್ವಜನಿಕರನ್ನು ಸಂಘಟಿಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ನೀಡಿರುವ ಗಡಿಯಾರಗಳನ್ನು ತಾಲೂಕು ಆಡಳಿತ ಕಚೇರಿಯ ಎಲ್ಲಾ ಕೊಠಡಿಗಳಲ್ಲಿ ಅಳವಡಿಸಲಾಗಿತ್ತು. ತಹಶೀಲ್ದಾರ್ ಎಂ.ದಯಾನಂದ್ ಬೋವಿ ಸಮುದಾಯದ ಪರ ನಿಂತು ಅವರ ಕೆಲಸ ಮಾಡಿಕೊಡುತ್ತಿದ್ದಾರೆ. ಬಡವರ, ರೈತರ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಚರ್ಚೆಗೆ ನಾನು ಸಿದ್ಧ: ತಹಶೀಲ್ದಾರ್ ಎಂ.ದಯಾನಂದ್, ಶಿರಸ್ತೇದಾರ್ ರವಿಕುಮಾರ್ ಅವರ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವುದಾಗಿ ತನ್ನ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸಾಕ್ಷಿಯಿದೆ. ಸಕ್ಕನಹಳ್ಳಿ ಜಮೀನಿಗೆ ಅಕ್ರಮ ಖಾತೆ ಮಾಡಿಕೊಡಲು 60 ಲಕ್ಷ ರೂ. ಲಂಚ ಪಡೆದಿದ್ದಾರೆ. ತಾಲೂಕು ಆಡಳಿತ ಕಚೇರಿಯಲ್ಲಿ ಪ್ರಮುಖ ದಾಖಲೆಗಳು ಕಣ್ಮರೆಯಾಗಿದೆ. ಸರ್ವೆ ನಂ.75 ಹಿರೇಕಪರನಹಳ್ಳಿ ಜಮೀನಿಗೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮೂಲಕ ಲಂಚ ಪಡೆದಿದ್ದಾರೆ. ತಮ್ಮ ಮನೆಯನ್ನು ಕಚೇರಿಯನ್ನಾಗಿ ಮಾಡಿಕೊಂಡು ಹಣ ಪಡೆಯುತ್ತಿದ್ದಾರೆ. ಅವರು ಪ್ರಾಮಾಣಿಕ ಅಧಿಕಾರಿಯಾಗಿದಲ್ಲಿ ತಾವು ಭ್ರಷ್ಟಾಚಾರ ಮಾಡಿಲ್ಲ ಎಂಬುದನ್ನು ಸಾಬೀತು ಮಾಡಲಿ, ಚರ್ಚೆಗೆ ನಾನು ಸಿದ್ಧ ಎಂದು ಪಂತಾಹ್ವಾನ ನೀಡಿದರು. ಪುರಸಭೆ ಅಧ್ಯಕ್ಷೆ ಫರ್ಜಾನ ಸುಹೇಲ್, ತಾಪಂ ಇಒ ಎನ್.ವೆಂಕಟೇಶಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ಎಚ್ .ಡಿ.ಶೇಷಾದ್ರಿ, ಬಿಇಒ ಡಿ.ಎನ್.ಸುಕನ್ಯ, ಉಪತಹಶೀಲ್ದಾರ್ ಚಂದ್ರಶೇಖರ್ ಸೇರಿದಂತೆ ಅನೇಕರು ಹಾಜರಿದ್ದರು.