ರಬಕವಿ-ಬನಹಟ್ಟಿ: ನಮ್ಮ ಬಿಜೆಪಿ ಸರಕಾರ ಸಾರ್ವಜನಿಕರ ತೊಂದರೆಗೆ ಸದಾ ಸ್ಪಂದಿಸುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಾಮಪುರನ ದಾನಮ್ಮದೇವಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಪಿಂಚಣಿ ಅದಾಲತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ಮಾಸಾಶನ, ಮನಸ್ವಿನಿ ಸೇರಿದಂತೆ ಎಲ್ಲ ಬಗೆಯ ಮಾಸಾಶನದ ನೀಡಿಕೆಯ ಮೊತ್ತವನ್ನು ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚಿಸಿದ್ದಾರೆ. ಅಲ್ಲದೇ ಪತಿಯ ಮರಣದ ಬಳಿಕ 6 ತಿಂಗಳ ಕಾಲಾವದಿಯ ಒಳಗಾಗಿ ವಿಧವೆ ಪತ್ನಿ ನೀಡಿದ ಅರ್ಜಿಯನ್ನು ಪರಿಗಣಿಸಿ ರೂ .20 ಸಾವಿರ ಮೊತ್ತವನ್ನು ಸರ್ಕಾರ ನೀಡುತ್ತಿದೆ. ಸರ್ಕಾರ ನೀಡುವ ಎಲ್ಲ ಯೋಜನೆಗಳನ್ನು ಅರ್ಹರಿಗೆ ತಿಳಿಸಿ ಅವರು ಸರ್ಕಾರದ ನೆರವು ಪಡೆದು ತಮ್ಮ ಬದುಕು ರೂಪಿಸಿಕೊಳ್ಳಲು ಪ್ರಜ್ಞಾವಂತರು ಯತ್ನಿಸಬೇಕೆಂದರು. ಸ್ಥಗಿತಗೊಂಡ ಪಿಂಚಣಿಗಳನ್ನು ತಕ್ಷಣವೇ ಪುನಾರಂಭಿಸಲು ಕಂದಾಯ ಅದಿಕಾರಿಗಳಿಗೆ ಈಗಾಗಲೇ ಆದೇಶಿಸಿದ್ದು ಪ್ರಮಾದಗಳನ್ನು ಸರಿಪಡಿಸಿ ಎಲ್ಲ ವಿಧದ ಪಿಂಚಣಿಯನ್ನು ನೀಡಲು ಮತ್ತು ವಂಚಿತ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಅದಿಕಾರಿಗಳು ಶ್ರಮಿಸಬೇಕು.
ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಲು ರಾಜ್ಯ ಸರ್ಕಾರ ನೀಡುತ್ತಿದ್ದ ವಿದ್ಯಾನಿದಿ ಯೋಜನೆಯನ್ನು ನೇಕಾರ ಮಕ್ಕಳಿಗೂ ವಿಸ್ತರಿಸಿ ಆದೇಶ ಹೊರಡಿಸಲಾಗುತ್ತಿದೆ. ಕಿಸಾನ್ ಸಮ್ಮಾನ ಯೋಜನೆಯಂತೆ ನೇಕಾರ ಸಮ್ಮಾನ್ ಯೋಜನೆಗೂ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ನೇಕಾರರಿಗೂ ಮಾಸಿಕ ರೂ .4 ಸಾವಿರ ಮಾಸಾಶನ ದೊರೆಯುತ್ತದೆ. ತೇರದಾಳ ಮತ್ತು ಮಹಾಲಿಂಗಪುರ ಹೋಬಳಿಕೇಂದ್ರಗಳಲ್ಲಿನ ಪಿಂಚಣಿದಾರರಿಗೆ ನೆರವಾಗಲು ಪ್ರತ್ಯೇಕವಾಗಿ ತೇರದಾಳ ಮತ್ತು ಮಹಾಲಿಂಗಪುರಗಳಲ್ಲಿ ಪಿಂಚಣಿ ಅದಾಲತ್ ನಡೆಸಲು ನಿರ್ಧರಿಸಲಾಗಿದೆ. ಪಿಂಚಣಿಗೆ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ನಾನು ಪ್ರತಿ 15 ದಿನಕ್ಕೊಮ್ಮೆ ಪಿಂಚಣಿ ಅದಾಲತ್ ನಡೆಸಲು ನಿರ್ಧರಿಸದ್ದೇನೆ. ರಬಕವಿ-ಬನಹಟ್ಟಿ ನಗರಸಭೆಗೆ ಈ ಬಾರಿ ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ರು.5 ಕೋಟಿ ಮೊತ್ತದ ವಿಶೇಷ ಅನುದಾನ ಮತ್ತು ರೂ .30 ಕೋಟಿ ನಗರೋತ್ಥಾನ ಯೋಜನೆಗೆ ಹಣ ಮಂಜೂರು ಮಾಡಿದ್ದಾರೆ ಎಂದರು.
ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಮತ್ತು ನಗರ ಸೌಂದರ್ಯೀಕರಣಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲದ ಕಾರಣ ಕ್ಷೇತ್ರದಲ್ಲಿನ ಅಗತ್ಯ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಸರ್ಕಾರದ ವಿವಿಧ ಇಲಾಖೆಗಳಿಂದ ಹೆಚ್ಚುವರಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ನಾನು ಬದ್ಧನಾಗಿದ್ದೇನೆ. ಜನತೆಯ ಸೇವೆ ಮಾಡಲು ಸರ್ಕಾರವಿದೆ. ಸರ್ಕಾರಕ್ಕೆ ಜನತೆಯ ಸಹಕಾರದ ಅಗತ್ಯ ಹೆಚ್ಚಿದೆ ಎಂದರು.
ರಬಕವಿಯ ವಿದ್ಯಾನಗರದಲ್ಲಿನ ಸಂತೆಯಲ್ಲಿ ಮರದ ರೆಂಬೆ ಬಿದ್ದು ಮಹಾದೇವ ಮಹಾಲಿಂಗಪೂರ ಎಂಬ ಯುವಕ ಮೃತನಾಗಿದ್ದರಿಂದ ಕುಟುಂಬಕ್ಕೆ ಪರಿಹಾರಧನ ನೀಡಲು ಅವಕಾಶವಿರದ ಕಾರಣ ಮುಖ್ಯಮಂತ್ರಿಗಳ ಮನವೊಲಿಸಿ ನೈಸರ್ಗಿಕ ಪ್ರಕೋಪದ ಪರಿಣಾಮ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರನಿದಿಯಿಂದ ರು.5 ಲಕ್ಷ ಪರಿಹಾರ ಮೊತ್ತವನ್ನು ಮೃತನ ಅವಲಂಬಿತ ಸದಸ್ಯರಿಗೆ ಚೆಕ್ ಮೂಲಕ ನೀಡಲಾಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ರಬಕವಿ-ಬನಹಟ್ಟಿ ನಗರಸಭೆ ಸ್ಥಾಯಿ ಸಮಿತಿ ಚೇರಮನ್ನರಾದ ಸದಾಶಿವ ಪರೀಟ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದೀಪಾ ಕೊಣ್ಣೂರ, ದುರ್ಗವ್ವ ಹರಿಜನ, ಶ್ರೀಶೈಲ ಬಾಗೇವಾಡಿ, ಯಲ್ಲಪ್ಪ ಕಟಗಿ, ವಿಜಯ ಕಲಾಲ, ಚಿದಾನಂದ ಹೊರಟ್ಟಿ, ಆನಂದ ಕಂಪು, ಪರಪ್ಪ ಬಿಳ್ಳೂರ, ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ, ಬಸವರಾಜ ಬಿಜ್ಜರಗಿ ಸೇರಿದಂತೆ ಅನೇಕರು ಇದ್ದರು.