ರಾಯಚೂರು: ಬೆಳಗಾವಿ ಅಧಿವೇಶನದಲ್ಲಿ ಹಮಾಲಿ ಕಾರ್ಮಿಕರ ಸಮಸ್ಯೆ ಕುರಿತು ಚರ್ಚಿಸುವಂತೆ ಆಗ್ರಹಿಸಿ ಸಿಐಟಿಯು ನೇನೃತ್ವದಲ್ಲಿ ಹಮಾಲಿ ಕಾರ್ಮಿಕರು ನಗರ ಶಾಸಕ ಶಿವರಾಜ್ ಪಾಟೀಲರಿಗೆ ಗುರುವಾರ ಮನವಿ ಸಲ್ಲಿಸಿದರು.
ದಿನಗೂಲಿ ಆಧಾರದಡಿ ದುಡಿಯುವ ಹಮಾಲರಿಗೆ ಭವಿಷ್ಯ ನಿಧಿ, ವಿಮಾ ಸೌಲಭ್ಯ, ಬೋನಸ್‌ನಂಥ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕ ಕಾನೂನು ಪ್ರಕಾರ ಸೌಲಭ್ಯಗಳೇ ಸಿಗುತ್ತಿಲ್ಲ. ಹೀಗಾಗಿ ಪಶ್ಚಿಮ ಬಂಗಾಲ ಮಾದರಿಯಲ್ಲಿ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಜಾರಿ ಮಾಡಬೇಕು, ಕಾರ್ಮಿಕರ ಕಲ್ಯಾಣಕ್ಕೆ ಮುಂದಿನ ಬಜೆಟ್‌ನಲ್ಲಿ 500 ರೂ. ಕೋಟಿ ಮೀಸಲಿಡಬೇಕು, ಕಾರ್ಮಿಕ ಮಂಡಳಿಯಿಂದ ನೀಡುವ ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್‌ಕಾರ್ಡ್‌ಗಳನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಹಮಾಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿದ ಪ್ರಧಾನಮಂತ್ರಿ ಜೀವನ ಭೀಮಾ ಮತ್ತು ಸುರಕ್ಷಾ ಯೋಜನೆಗಳನ್ನು ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ವಿತರಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ವಹಿಸಬೇಕು, ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಹಮಾಲಿ ಕಾರ್ಮಿಕರು ಸೇರಿದಂತೆ 11 ವಿಭಾಗದ ಅಸಂಘಟಿತ ಕಾರ್ಮಿಕರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದರು.
ಎಲ್ಲ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕರ್ನಾಟಕದ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಭೂ ಸುಧಾರಣಾ ಮತ್ತು ಜಾನುವಾರು ಹತ್ಯಾ ಕಾಯ್ದೆಗಳನ್ನು ಕೂಡಲೇ ರಾಜ್ಯ ಸರ್ಕಾರ ಹಿಂಪಡೆಯಬೇಕು. ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡದೆ ಕಾರ್ಮಿಕ ಪರ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಡಿ.ಎಸ್. ಶರಣಬಸವ, ಪ್ರಹ್ಲಾದ್ ರೆಡ್ಡಿ, ಲಕ್ಷ್ಮೀ ದೇವಮ್ಮ, ವರಲಕ್ಷ್ಮೀ, ಸಾಬಮ್ಮ, ನರಸಮ್ಮ ಸೇರಿ ಇತರರಿದ್ದರು.