ಕೆ.ಆರ್.ನಗರ: ರಾಗಿ ಮತ್ತು ಭತ್ತ ಖರೀದಿಯಲ್ಲಿ ರೈತರಿಗೆ ತೊಂದರೆಯಾಗಿ ತೂಕದಲ್ಲಿ ಮೋಸ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿ ಮೋಸ ಆಗುತ್ತಿರುವ ಬಗ್ಗೆ ರೈತರಿಂದ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಿಗೆ ಅನ್ಯಾಯ ವಾದಲ್ಲಿ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಸ್ಥಳದಲ್ಲಿ ಹಾಜರಿದ್ದ ರೈತರು ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳು ಮಾಡುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿ ಇದುವರೆಗೆ 15 ಸಾವಿರ ಕ್ವಿಂಟಲ್ ರಾಗಿ ಖರೀದಿಸಿದ್ದು, ಅದರಲ್ಲಿ ಪ್ರತಿ ಕ್ವಿಂಟಲ್‌ಗೆ ಮೂರು ಕೆ.ಜಿ. ಹೆಚ್ಚುವರಿಯಾಗಿ ಪಡೆದಿದ್ದು ಏನಾಯಿತು ಎಂದು ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡದ ಕೇಂದ್ರದ ಗ್ರೇಡರ್ ಸುನೀತಾ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಈ ಬಗ್ಗೆ ವರದಿ ನೀಡುವಂತೆ ತಾಕೀತು ಮಾಡಿದರು.
ಬೆಟ್ಟದಪುರ, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ಇತರೆ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಹಣ ನೀಡಿದ್ದಾರೆ. ಆದರೆ ಇಲ್ಲಿ ಈವರೆಗೆ ಖರೀದಿ ಮಾಡಿದ ರಾಗಿ ಮತ್ತು ಭತ್ತಕ್ಕೆ ಹಣ ನೀಡದ ಬಗ್ಗೆ ರೈತರು ದೂರಿದಾಗ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ ಎ.ಎಂ. ಯೋಗೇಶ್ ಅವರೊಂದಿಗೆ ಮಾತನಾಡಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ತಿಳಿಸಿದರು.
ಚೀಲ ತುಂಬಲು ಹಾಗೂ ಸುರಿಯಲು ಒಂದು ಕ್ವಿಂಟಲಿಗೆ 50 ರೂ. ಹಣ ಪಡೆಯುತ್ತಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ರೈತರು ಇದರಿಂದ ತುಂಬಾ ಅನ್ಯಾಯವಾಗುತ್ತಿದೆ. ಇದನ್ನು ತಪ್ಪಿಸಿ ಕೂಲಿ ದರ ಕಡಿಮೆಗೊಳಿಸುವಂತೆ ಒತ್ತಾಯಿಸಿದರು.
ತಹಶೀಲ್ದಾರ್ ಬಾಲಸುಬ್ರಹ್ಮಣ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಿ.ಮಹೇಶ್, ಜೆಡಿಎಸ್ ಮುಖಂಡ ಹರೀಶ್ ಇದ್ದರು.