Advertisement

ಪೊಲೀಸ್‌ ವಶದಲ್ಲಿದ್ದ ಶಾಸಕ ರೇಣುಕಾಚಾರ್ಯ

12:18 AM Jun 01, 2019 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಶುಕ್ರವಾರ ಹಲವು ಗಂಟೆಗಳ ಕಾಲ ಪೊಲೀಸ್‌ ವಶದಲ್ಲಿದ್ದು ನಂತರ ಬಿಡುಗಡೆಯಾದರು.

Advertisement

2018ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಸೇರಿ 9 ಮಂದಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ಅನ್ವಯ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್‌ ರೀಕಾಲ್‌ ಮಾಡಿಸುವ ಸಲುವಾಗಿ ಶಾಸಕ ರೇಣುಕಾಚಾರ್ಯ ಹಾಗೂ ಅವರ ಆಪ್ತ ಮಾಜಿ ಶಾಸಕ ಬಿ.ಪಿ ಹರೀಶ್‌ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್‌ ರೀಕಾಲ್‌ ಅರ್ಜಿ ಸಲ್ಲಿಸಿದರು. ಈ ವೇಳೆ ನ್ಯಾಯಾಲಯ, ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚಿಸಿತು. ಹೀಗಾಗಿ, ನ್ಯಾಯಾಲಯದ ಆವರಣದಲ್ಲಿ ಮಧ್ಯಾಹ್ನದವರೆಗೂ ಪೊಲೀಸರ ಕಸ್ಟಡಿಯಲ್ಲಿ ರೇಣುಕಾಚಾರ್ಯ ಕುಳಿತಿದ್ದರು.

ವಿಚಾರಣೆ ಆರಂಭವಾದ ಬಳಿಕ ವಾರೆಂಟ್‌ ರೀಕಾಲ್‌ ಮಾನ್ಯ ಮಾಡಿದ ನ್ಯಾಯಾಲಯ ಇಬ್ಬರಿಗೂ ಪೊಲೀಸ್‌ ಕಸ್ಟಡಿಯಿಂದ ಮುಕ್ತಗೊಳಿಸಿ ಜೂನ್‌ 16ಕ್ಕೆ ವಿಚಾರಣೆ ಮುಂದೂಡಿತು. ಈ ಹಿಂದೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್‌ ನೀಡಿದ್ದರೂ ರೇಣುಕಾಚಾರ್ಯ ಗೈರುಹಾಜರಾಗಿದ್ದರು. ಹೀಗಾಗಿ, ನ್ಯಾಯಾಲಯ ವಾರೆಂಟ್‌ ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next