Advertisement

ಅರುಣ್‌ ಸಿಂಗ್‌ ಭೇಟಿ ಮಾಡಿದ ರೇಣುಕಾಚಾರ್ಯ: ಸಚಿವರ ವರ್ತನೆ ಬಗ್ಗೆ ದೂರು

09:33 PM Feb 08, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಇತ್ತೀಚೆಗಷ್ಟೇ ಕೆಲವು ಸಚಿವರು, ಶಾಸಕರ ದೂರವಾಣಿ ಕರೆಯ ಸ್ವೀಕರಿಸುವುದಿಲ್ಲ. ಅಲ್ಲದೆ, ನಮ್ಮ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನೂ ಮಾಡಿ ಕೊಡುವುದಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬೆಳವಣಿಗೆಯ ನಡುವೆಯೇ ರಾಜ್ಯ ಪ್ರಭಾರಿಯಾಗಿರುವ ಅರುಣ್‌ ಸಿಂಗ್‌ ಅವರನ್ನು ಖುದ್ದು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಮಂಗಳವಾರ ನವದೆಹಲಿಯಲ್ಲಿ ಅರುಣ್‌ ಸಿಂಗ್‌ ಅವರ ಜೊತೆ ಸುಮಾರು 30 ನಿಮಿಷಗಳ ಕಾಲ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅರುಣ್‌ ಸಿಂಗ್‌ ಅವರ ಕರೆಯ ಮೇರೆಗೆ ನವದೆಹಲಿಗೆ ತೆರಳಿದ್ದ ರೇಣುಕಾಚಾರ್ಯ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಾತುಕತೆಯ ಸಂದರ್ಭದಲ್ಲಿ ಅರುಣ್‌ ಸಿಂಗ್‌ ಅವರು ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಂತೆ ಯಾರೆಲ್ಲ ಸಚಿವರು ಶಾಸಕರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ ಎಂಬುದರ ಕುರಿತು ವಿವರ ಪಡೆದಿದ್ದಾರೆ.

ಎಲ್ಲಾ ಸಚಿವರು ಈ ರೀತಿಯಾಗಿ ನಡೆದುಕೊಳ್ಳುವುದಿಲ್ಲ .ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸುತ್ತಾರೆ. ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಅಂತಹವರ ಬಗ್ಗೆ ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂಬುದನ್ನು ಅರುಣ್‌ ಸಿಂಗ್‌ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ತಾಳ್ಮೆಯಿಂದ ಇರಿ
ಇನ್ನು ಮಾತುಕತೆಯ ವೇಳೆ ಅರುಣ್‌ ಸಿಂಗ್‌ ಅವರು ರೇಣುಕಾಚಾರ್ಯ ಅವರಿಗೆ ಸಂಯಮದಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಿಮಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ಕೊರೊನಾ ಸಂದರ್ಭದಲ್ಲಿ ನೀವು ಮಾಡಿರುವ ಕೆಲಸಗಳನ್ನು ವರಿಷ್ಟರು ಗಮನಿಸಿದ್ದಾರೆ. ಸೂಕ್ತ ಕಾಲದಲ್ಲಿ ಪಕ್ಷವು ನಿಮಗೆ ಮಹತ್ವದ ಜವಾಬ್ದಾರಿ ನೀಡಲಿದೆ ಎಂಬ ಅಭಯ ನೀಡಿದ್ದಾರೆ.
ಸಚಿವ ಸ್ಥಾನ ನಿಮಗೆ ಹಿಂದೆಯೇ ಸಿಗಬೇಕಿತ್ತು. ಕೆಲವು ಕಾರಣಗಳಿಂದ ಕೈ ತಪ್ಪಿ ಹೋಗಿದೆ. ಪಕ್ಷವು ನೀವು ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿದೆ. ತಾಳ್ಮೆಯಿಂದ ಇದ್ದರೆ ಖಂಡಿತವಾಗಿಯೂ ನಿಮಗೆ ಉತ್ತಮ ಭವಿಷ್ಯ ಇದೆ ಭರವಸೆ ಕೊಟ್ಟಿದ್ದಾರೆ.

ನಿಮ್ಮ ಬಗ್ಗೆ ವೈಯಕ್ತಿಕವಾಗಿ ನನಗೆ ಬಹಳಷ್ಟು ಗೌರವವಿದೆ. ರಾಜಕೀಯದಲ್ಲಿ ಸಹನೆ ಮತ್ತು ತಾಳ್ಮೆ ಮುಖ್ಯ. ಶೀಘ್ರದಲ್ಲೇ ನಿಮ್ಮ ಭವಿಷ್ಯವು ಉಜ್ವಲವಾಗಲಿದೆ ಎಂದು ಅರುಣ್‌ ಸಿಂಗ್‌ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ರೇಣುಕಾಚಾರ್ಯ ಎಂ.ಪಿ.ಕುಮಾರಸ್ವಾಮಿ, ಶಿವರಾಜ್‌ ಪಾಟೀಲ್‌ ಅವರುಗಳು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next