ಕಲಬುರಗಿ: ವಿಷಕಾರಿ ಆಗಿದ್ದರಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜನ ಸೋಲಿಸಿದ್ದಾರೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ಕುಮಾರ ಕಟೀಲ್ ಅವರಿಗೆ ಖರ್ಗೆ ಅವರು ವಿಷಕಾರಿಯಾಗಿದ್ದರಿಂದಲೇ ನಮ್ಮ ಭಾಗಕ್ಕೆ 371ನೇ (ಜೆ) ಕಲಂ, ರೈಲ್ವೆ ಡಿವಿಜನ್, ಇಎಸ್‌ಐಸಿ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಕುಟುಕಿದ್ದಾರೆ.
ಟ್ವಿಟ್ ಮಾಡಿರುವ ಪ್ರಿಯಾಂಕ್ ಖರ್ಗೆ ವಿಷಕಾರಿಯಾಗಿ ದ್ದರಿಂದಲೇ, 371(ಜೆ), ರೈಲ್ವೆ ಡಿವಿಜನ್, ಇಎಸ್ ಐಸಿ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ನಿಮ್l, ವಿಮಾನ ನಿಲ್ದಾಣ, ಜವಳಿ ಪಾರ್ಕ್, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯಂತಹ ಪ್ರಮುಖ ಯೋಜನೆಗಳು ಈ ಭಾಗಕ್ಕೆ ಬಂದಿವೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಸ್ತುತ ಸರ್ಕಾರದಲ್ಲಿ ಜಿಲ್ಲೆಯಿಂದ ಒಬ್ಬ ಶಾಸಕರೂ ಸಚಿವರನ್ನಾಗಿ ಮಾಡಲಿಲ್ಲ. ಮಕರಂದ ಸೂಸುವ ಬಿಜೆಪಿಯಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನವೂ ಸಿಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿಯಿಂದ ಅನುದಾನ ಹಾಗೂ ಪ್ರತ್ಯೇಕ ರೈಲ್ವೆ ವಿಭಾಗ ಬಿಡಿ, ಒಂದೂ ರೈಲನ್ನು ನಿಲ್ಲಿಸಲು ನಿಮ್ಮಿಂದ ಆಗಲಿಲ್ಲ. ಬಿಜೆಪಿಯವರ ಮಕರಂದದ ಸುವಾಸನೆಗೆ ಹಿಂದಿನ ಸರ್ಕಾರದ ಯೋಜನೆಗಳೆಲ್ಲ ರದ್ದಾಗಿವೆ. ಸಚಿವರಾದ ಕೆ.ಎಸ್. ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಲಾಗದಂತ ದುರ್ಬಲ ಅಧ್ಯಕ್ಷ ಎಂದು ಕಟೀಲ್ ಅವರನ್ನು ಪ್ರಿಯಾಂಕ್ ಟೀಕಿಸಿದ್ದಾರೆ.
ಕಾಂಗ್ರೆಸ್ ಟೀಕೆ:
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಕಾರಿ ಎನ್ನುವ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ. ಖರ್ಗೆ ಅವರು ವಿಷಕಾರಿಯಾಗಿದ್ದರೆ ಈ ಭಾಗದಲ್ಲಿ 11 ಬಾರಿ ಚುನಾವಣೆಯಲ್ಲಿ ಗೆಲುವು ಕಾಣುತ್ತಿರಲಿಲ್ಲ. ಅದೇ ರೀತಿ ಖರ್ಗೆ ಈ ಭಾಗಕ್ಕೆ ಇಎಸ್‌ಐ ಆಸ್ಪತ್ರೆ, ಕೇಂದ್ರಿಯ ವಿಶ್ವವಿದ್ಯಾಲಯ, ಕಲಂ 371 (ಜೆ), ವಿಮಾನ ನಿಲ್ದಾಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಪೊಲೀಸ್ ತರಬೇತಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಮೇಲಾಗಿ ರೈಲ್ವೆ ಸಚಿವರಾಗಿರುವ ಸಂದರ್ಭದಲ್ಲಿ ಜಿಲ್ಲೆಯಿಂದ ರಾಜ್ಯ ಕೇಂದ್ರ ಸ್ಥಾನಕ್ಕೆ ಬೀದರ-ಯಶವಂತಪುರ, ಕಲಬುರಗಿ ಮಾರ್ಗವಾಗಿ ಸೊಲ್ಲಾಪುರ-ಯಶವಂತಪುರ, ಸಿಕಿಂದ್ರಾಬಾದ-ಹುಬ್ಬಳ್ಳಿ ಮತ್ತು ಅನೇಕ ಹೊಸ ರೈಲುಗಳ ಓಡಾಟ ಹಾಗೂ ಕಲಬುರಗಿ ಹಾಗೂ ಇತರೆ ಭಾಗದ ರೈಲ್ವೆ ನಿಲ್ದಾಣಗಳ ನವೀಕರಣ, ಯಾದಗಿರಿ ಜಿಲ್ಲೆಯ ಕಡೇಚೂರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಮತ್ತು ಬೆಂಗಳೂರಿನಿಂದ ವಾರಣಾಸಿಗೆ ರೈಲ್ವೆ ಹೀಗೆ ಇನ್ನೂ ಅನೇಕ ಕೆಲಸಗಳು ಆಗುತ್ತಿದ್ದವೇ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಪ್ರಶ್ನಿಸಿದ್ದಾರೆ.
ಈ ಭಾಗಕ್ಕೆ ಮಂಜೂರಿ ಮಾಡಿಸಿದಂತಹ ಅನೇಕ ಯೋಜನೆಗಳು ಮತ್ತು ಕಚೇರಿಗಳು ಈಗ ಬಿಜೆಪಿ ಸರಕಾರ ರದ್ದುಗೊಳಿಸುವುದು, ಬೇರೆ ಕಡೆ ಸ್ಥಳಾಂತಗೊಳಿಸುವದನ್ನು ಮಾಡಿದೆ. ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಡುತ್ತಿರುವ ತಾರತಮ್ಯ ಧೋರಣೆ ಮತ್ತು ವಿಷಕಾರಿ ಕೆಲಸವನ್ನು ಎತ್ತಿ ತೋರಿಸುತ್ತಿದೆ. ಮುಖ್ಯವಾಗಿ ಕಟೀಲು ಅವರಿಗೆ ರಾಜಕೀಯ ಅನುಭವ ಹಾಗೂ ತಿಳಿವಳಿಕೆ ಕಡಿಮೆ ಇದೆ ಎಂದು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.