ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವುದಕ್ಕೆ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜೆಡಿಎಸ್ ಎಂಬ ಮುಖಪುಟದಲ್ಲಿ ತನ್ನ ಕ್ಷೇತ್ರದ ಹೂ ಬೆಳೆಗಾರರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಪಕ್ಕದ ರಾಜ್ಯದ ಜನರ ಕಿವಿಗೆ ಹೂ ಇಡುತ್ತಿರುವ ಬಿಲ್ಡಪ್ ಈಶ್ವರ್ ಎಂದು ಬರೆದು ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯ ಅವ್ಯವಸ್ಥೆಯ ದೃಶ್ಯಗಳನ್ನು ಟ್ಯಾಗ್ ಮಾಡಿದ್ದಾರೆ.
ಜೆಡಿಎಸ್ ಮುಖಂಡರ ಆಕ್ರೋಶ: ಇನ್ನೂ ಚಿಕ್ಕಬಳ್ಳಾಪುರದ ಜೆಡಿಎಸ್ ಯುವ ಮುಖಂಡ ಅಖೀಲ್‌ರೆಡ್ಡಿ ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹಾಗೂ ಹೂ ಮಾರುಕಟ್ಟೆ ವ್ಯವಸ್ಥೆಯ ದೃಶ್ಯವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 31 ಸಾವಿರ ಮಂದಿ ಲೈಕ್ ಒತ್ತಿದ್ದು 1,700 ಮಂದಿ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ತಾತ್ಕಾಲಿಕ ಜಾಗದಲ್ಲಿ ನಡೆಯುತ್ತಿರುವ ಹೂ ಮಾರುಕಟ್ಟೆಯ ದುಸ್ಥಿತಿ ಬಗ್ಗೆ ಜೆಡಿಎಸ್ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದೇ, ಪಕ್ಕದ ರಾಜ್ಯದ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳಿರುವ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಿಡಿಕಾರಿದ್ದಾರೆ. ತಾನು ರೈತ ಮಗ ಎಂದು ಹೇಳಿಕೊಂಡು ಓಟ್ ಹಾಕಿಕೊಂಡು ಗೆದ್ದು ಬಿಟ್ಟಿದೀರಿ, ಚಿಕ್ಕಬಳ್ಳಾಪುರದಲ್ಲಿ ಸರಿಯಾದ ರಸ್ತೆ ಇಲ್ಲ. ಚರಂಡಿ ಇಲ್ಲ. ಮಳೆ ಬಂದರೆ ಓಡಾಟಕ್ಕೆ ಆಗಲ್ಲ. ಇದಕ್ಕೆ ಪರಿಹಾರ ಕಲ್ಪಿಸಿ, ನೀವು ನೋಡಿದರೆ ಚಿಕ್ಕಬಳ್ಳಾಪುರದಲ್ಲಿ ಏನು ಸಮಸ್ಯೆ ಇಲ್ಲ ಅಂತ ಎಲ್ಲೋ ಹೋಗಿ ಚುನಾವಣೆ ಪ್ರಚಾರದಲ್ಲಿ ಇದ್ದೀರಿ. ಇಲ್ಲಿಗೆ ಬಾರಣ್ಣ, ನೀವು ಇಲ್ಲಿ ಬರಲೇಬೇಕಣ್ಣ ಅಂತ ಯುವ ರೈತರಾಗಿರುವ ಅಖೀಲ್‌ರೆಡ್ಡಿ ಶಾಸಕ ಪ್ರದೀಪ್ ಈಶ್ವರ್‌ಗೆ ಕೋರಿದ್ದಾರೆ.
ಕೆಸರು ಗದ್ದೆಯಾದ ಹೂ ಮಾರುಕಟ್ಟೆ!: ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ ಬಳಿ ಇರುವ ತಾತ್ಕಲಿಕ ಹೂ ಮಾರುಕಟ್ಟೆ ಸಂಪೂರ್ಣ ಕೆಸರು ಗೆದ್ದೆಯಾಗಿದ್ದು, ವಾಹನಗಳ ಹಾಗೂ ರೈತರ ಓಡಾಟಕ್ಕೆ ತೀವ್ರ ಸಮಸ್ಯೆ ಆಗಿದೆ. ಹೂ ಮಾರುಕಟ್ಟೆಯ ಅವ್ಯವಸ್ಥೆಯನ್ನು ವಿಡಿಯೋ ಮಾಡಿ ಶಾಸಕ ಪ್ರದೀಪ್ ಈಶ್ವರ್‌ಗೆ ಟ್ಯಾಗ್ ಮಾಡಿರುವ ನೆಟ್ಟಿಗರು ಮೊದಲು ಚಿಕ್ಕಬಳ್ಳಾಪುರ ಬಾ ಅಂತ ಕರೆಯುತ್ತಿದ್ದು, ಈ ವಿಡಿಯೋ ತುಣಕುಗಳು ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.