Advertisement

ಶಾಸಕಿ ಪೂರ್ಣಿಮಾ ಅಭಿಮಾನಿಗಳಿಂದ ಪಾದಯಾತ್ರೆ

06:11 PM Aug 07, 2021 | Team Udayavani |

ಹಿರಿಯೂರು: ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಅತಿದೊಡ್ಡ ಹೋಬಳಿ
ಧರ್ಮಪುರ ಗ್ರಾಮದಿಂದ ಪೂರ್ಣಿಮಾ ಶ್ರೀನಿವಾಸ್‌ ನೂರಾರು ಅಭಿಮಾನಿಗಳು ಹಿರಿಯೂರು ತಾಲೂಕು ಕಚೇರಿವರೆಗೆ 30 ಕಿ.ಮೀ ಪಾದಯಾತ್ರೆ ನಡೆಸಿದರು.

Advertisement

ದಾರಿಯುದ್ದಕ್ಕೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಪೂರ್ಣಿಮಾ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು
ಆಗ್ರಹಿಸಿದರು. ಇನ್ನು ಕೆಲ ಅಭಿಮಾನಿಗಳು ಬೈಕ್‌ಗಳ ಮೂಲಕ ಭಾಗವಹಿಸಿದ್ದರು. ಸಂಜೆ ವೇಳೆಗೆ ಹಿರಿಯೂರು ನಗರಕ್ಕೆ ಪಾದಯಾತ್ರೆ ಆಗಮಿಸುತ್ತಿದಂತೆ ಸಾವಿರಾರು ಅಭಿಮಾನಿಗಳು ಪಾದಯಾತ್ರೆಯಲ್ಲಿ ಸೇರಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿ ನೀಡಿದರು.

ತಾಪಂ ಮಾಜಿ ಸದಸ್ಯ ಯಶವಂತ್‌ ರಾಜ್‌ ಮಾತನಾಡಿ, ಬಸವರಾಜ್‌ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ನಿಜಕ್ಕೂ
ಖಂಡನೀಯ. ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಕೋಟಾದಡಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಶಿರಾ ಹಾಗೂ ಉತ್ತರ ಕರ್ನಾಟಕದಲ್ಲಿ ಪೂರ್ಣಿಮಾ ಅವರು ಪ್ರವಾಸ ಕೈಗೊಂಡು ಯಾದವ ಜನಾಂಗದ ಮತಗಳನ್ನು ಬಿಜೆಪಿಗೆ ಬರುವಂತೆ ಮಾಡಲು ಶ್ರಮಿಸಿದ್ದಾರೆ. 29 ಸೀಟುಗಳಲ್ಲಿ 15 ಸೀಟುಗಳನ್ನು ಕೇವಲ ಎರಡೇ ಜಾತಿಗೆ ಮೀಸಲಿಟ್ಟಿರುವುದು ಬಿಜೆಪಿ ಅಸಮಾನತೆ ಧೋರಣೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.

ಇದನ್ನೂ ಓದಿ:ಮಸ್ಕಿ ಪೊಲೀಸರ ಕಾರ್ಯಾಚರಣೆ : ನಾಲ್ವರು ಕಳ್ಳರ ಸಹಿತ 4 ಲಕ್ಷ ಮೌಲ್ಯದ ಮೊಬೈಲ್, ಬೈಕ್ ಜಪ್ತಿ

ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ರಾಜ್ಯದ ರಾಜಕಾರಣದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು ಗೊಲ್ಲ ಸಮುದಾಯದ ನಿರ್ಣಾಯಕ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಚಿವ ಸಂಪುಟದಲ್ಲಿ
ಸ್ಥಾನ ನೀಡದೆ, ಮಕ್ಕಳ ಮೊಟ್ಟೆ ಹಗರಣದಲ್ಲಿ ಭಾಗಿಯಾಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ನೀಡಿರುವುದು ಬಿಜೆಪಿಯ ದೌರ್ಬಲ್ಯ ಎತ್ತಿ ತೋರಿಸುತ್ತಿದೆ. ಸಚಿವ ಸ್ಥಾನ ಸಿಗದಿರುವುದು ನಿಜಕ್ಕೂ ಅನ್ಯಾಯವಾಗಿದೆ.

Advertisement

ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಹಿರಿಯೂರು ಬಂದ್‌ ಮಾಡಿ, ನಂತರ ಹಿರಿಯೂರಿನಿಂದ ಬೆಂಗಳೂರು ತನಕ ಲಕ್ಷಾಂತರ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಧರ್ಮಪುರ ಗ್ರಾಮದ ಮುಖಂಡರಾದ ಶಿವಣ್ಣ, ಬಂಗಾರಪ್ಪ, ಅಭಿನಂದನ್‌, ಪುಟ್ಟರಾಜು, ರಂಗನಾಥ್‌, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ಜಿಪಂ ಮಾಜಿ ಸದಸ್ಯ ಎಂ.ಮಂಜುನಾಥ್‌, ಡೀಶ್‌ ಮಂಜುನಾಥ್‌, ಎಚ್‌. ಆರ್‌. ತಿಮ್ಮಯ್ಯ, ಅಲ್ಪಸಂಖ್ಯಾತರ ಮುಖಂಡರಾದ ಅಸ್ಗರ ಅಹಮದ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌, ಸದಸ್ಯರಾದ ಸಣ್ಣಪ್ಪ,ಪಲ್ಲವ್‌, ಶರವಣನ್‌, ಕರಿಯಣ್ಣ ಅಭಿಮಾನಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next