Advertisement

ನನ್ನ ಕ್ಷೇತ್ರದ ಅಭಿವೃದ್ಧಿಗೆ ನಿನ್ನನ್ನು ಕಾಯಬೇಕಾ?

01:37 PM Mar 01, 2021 | Team Udayavani |

ಮಂಡ್ಯ: ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿಸುವುದಕ್ಕೆ ನಾನು ನಿನ್ನನ್ನು ಕಾಯಬೇಕಾ, ನೀನು ಅಷ್ಟು ದೊಡ್ಡವನಾ. ನಿನ್ನನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಿ ಬೇರೆ ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತೇನೆ ಎಂದು ಶಾಸಕ ಎಂ.ಶ್ರೀನಿವಾಸ್‌ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆಯಿತು.

Advertisement

ಕಾವೇರಿ ಜಲಾನಯನ ಯೋಜನೆಯಡಿ ಉಮ್ಮಡಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಕಾಳೇಗೌಡರ ಜಮೀನಿನವರೆಗೆ ಅಚ್ಚುಕಟ್ಟುವರೆಗೆ ಹೋಗುವ ಮೆಟ್ಲಿಂಗ್‌ ಮಾಡುವ 8 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನಿಗದಿಯಾಗಿತ್ತು. ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಉಮ್ಮಡಹಳ್ಳಿ ಗ್ರಾಮಕ್ಕೆ ಶಾಸಕ ಎಂ.ಶ್ರೀನಿವಾಸ್‌ ತೆರಳಿದ್ದರು. ಆ ವೇಳೆಗೆ ಇಂಜಿನಿಯರ್‌ ರಶ್ಮಿ ಹಾಗೂ ಗುತ್ತಿಗೆದಾರ ಕನಕಪುರ ಚೇತನ್‌ ಬಂದಿರಲಿಲ್ಲ. ಇದನ್ನು ನೋಡಿದ ಶಾಸಕರು ಕೋಪಗೊಂಡರು. ಸ್ವಲ್ಪ

ಹೊತ್ತಿನಲ್ಲೇ ಇಂಜಿನಿಯರ್‌ ರಶ್ಮಿ ಸ್ಥಳಕ್ಕೆ ಧಾವಿಸಿದರು. ಆ ಸಮಯದಲ್ಲಿ ಶಾಸಕರು ಇಂಜಿನಿಯರ್‌ ರಶ್ಮಿ ಅವರನ್ನು ಕಂಡು ಏನ್ರೀ, ಅಧಿಕಾರಿಗಳಾಗಿ ನೀವು ಇಷ್ಟು ತಡವಾಗಿ ಬರಬಹುದೇ. ನಾವು ನಿಮ್ಮನ್ನು ಕಾಯಬೇಕಾ. ಎಲ್ಲಿ ಗುತ್ತಿಗೆದಾರರು ಎಂದು ಕೇಳಿದರು.

ಕೂಡಲೇ ಇಂಜಿನಿಯರ್‌ ರಶ್ಮಿ ಗುತ್ತಿಗೆದಾರ ಚೇತನ್‌ಗೆ ಕರೆ ಮಾಡಿದರು. ಕಾರು ಪಂಕ್ಚರ್‌ ಆಗಿದೆ. ಬರುತ್ತಿದ್ದೇನೆ ಎಂದು ಹೇಳಿದರು. ಇದರಿಂದ ಬೇಸರಗೊಂಡ ಶಾಸಕ ಎಂ.ಶ್ರೀನಿವಾಸ್‌ ವಾಪಸ್‌ ತೆರಳುವುದಕ್ಕೆ ಕಾರು ಹತ್ತಿ ಕುಳಿತರು. ಆ ವೇಳೆಗೆ ಗುತ್ತಿಗೆದಾರ ಕನಕಪುರ ಚೇತನ್‌ ಅಲ್ಲಿಗೆ ಬಂದುಶಾಸಕರನ್ನು ಭೇಟಿ ಮಾಡಿದರು.

ಗುತ್ತಿಗೆದಾರ ಬ್ಲಾಕ್‌ ಲೀಸ್ಟ್‌ಗೆ: ಯಾರಯ್ಯ ನೀನು. ಎಷ್ಟು ಹೊತ್ತಿಗಯ್ಯ ಬರೋದು. ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ನಾನು ಬಂದು ನಿನ್ನನ್ನು ಕಾಯಬೇಕಾ. ನಾನು ಗುದ್ದಲಿ ಪೂಜೆ ಮಾಡೋಲ್ಲ ಹೋಗು. ನಿನ್ನನ್ನ ಬ್ಲಾಕ್‌ ಲೀಸ್ಟ್‌ಗೆ ಸೇರಿಸಿ ಬೇರೆ ಗುತ್ತಿಗೆದಾರನಿಂದ ಕೆಲಸ ಮಾಡಿಸುತ್ತೇನೆ. ನಿನ್ನಿಂದ ನಾನು ಕೆಲಸ ಮಾಡಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಅಲ್ಲಿಂದ ವಾಪಸಾದರು.

Advertisement

ಬೇರೆ ಗುತ್ತಿಗೆದಾರನಿಂದ ಕೆಲಸ: ಶಾಸಕರು ಕೋಪಿಸಿಕೊಂಡು ಅಲ್ಲಿಂದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಚಾಮಲಾಪುರ ಕಡೆ ತೆರಳಿದ್ದರು. ಅಲ್ಲಿಗೆ ಬಂದ ಉಮ್ಮಡಹಳ್ಳಿ ಗ್ರಾಮಸ್ಥರು, ಸಾರ್ವಜನಿಕರು ಓಡಾಡುವುದಕ್ಕೆ ತುಂಬಾ ತೊಂದರೆಯಾಗಿದೆ. ದಯವಿಟ್ಟು ಬಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವಂತೆ ಮನವಿ ಮಾಡಿದರು. ಅದಕ್ಕೂ ಒಪ್ಪದ ಶಾಸಕ ಎಂ.ಶ್ರೀನಿವಾಸ್‌, ಆ ಗುತ್ತಿಗೆದಾರನಿಂದ ಕೆಲಸ ಮಾಡಿಸುವುದಿಲ್ಲ. ಬೇರೊಬ್ಬಗುತ್ತಿಗೆದಾರನ ಮೂಲಕ ಕೆಲಸ ಮಾಡಿಸಿಕೊಡುವ ಭರವಸೆ ನೀಡಿ ಕಳುಹಿಸಿದರು.

ಹೊಸಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ: ಮಂಡ್ಯ ನಗರದ 20ನೇ ವಾರ್ಡ್‌ನ ಹೊಸಹಳ್ಳಿ ಶ್ರೀಮಾರಮ್ಮದೇವಸ್ಥಾನದ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ. ಮತ್ತುಸ್ಮಶಾನ ಅಭಿವೃದ್ಧಿಗೆ 9 ಲಕ್ಷ ರೂ. ಸೇರಿದಂತೆ ಒಟ್ಟು 15ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್‌ ಭಾನುವಾರ ಚಾಲನೆ ನೀಡಿದರು.

ನಗರಸಭೆಯ 15ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ಧಿ, ಕೂರುವ ಬೆಂಚುಗಳು ಹಾಗೂ ಪುಟ್‌ಬಾತ್‌ ನಿರ್ಮಾಣ ಸೇರಿದಂತೆ ಇನ್ನಿತರೆ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿದರು.ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಮುಖಂಡರಾದ ಹೊಸಳ್ಳಿ ಸುರೇಶ್‌, ಲಿಂಗಣ್ಣ, ಶಿವಲಿಂಗಣ್ಣ, ಬಿಜೆಪಿ ಮುಖಂಡ ನಾಗೇಶ್‌ ಹಾಗೂ ಹೊಸಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next