ಮಧುಗಿರಿ: ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಎಲ್ಲೂ ಜನರ ಆಶೋತ್ತರಕ್ಕೆ ಚ್ಯುತಿಬಾರದಂತೆ ನಡೆದುಕೊಂಡಿದ್ದೇನೆ. ಇದೇ ಸಹಕಾರ ಮುಂದೆಯೂ ನೀಡಿ ನಿಮ್ಮ ಋಣ ತೀರಿಸುವ ಅವಕಾಶ ನೀಡುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ದೊಡ್ಡಯಲ್ಕೂರು ಗ್ರಾಮದ ಶ್ರೀ ಚೌಡೇಶ್ವರಿ ದೇಗುಲದ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಮತ್ತೂಮ್ಮೆ ಶಾಸಕನಾಗುವ ಇಚ್ಛೆಯನ್ನು ಪರೋಕ್ಷವಾಗಿ ಜನತೆಯ ಮುಂದಿಟ್ಟರು.
ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂಬ ಮಾತಿಗೆ ಕಾರ್ಯಕರ್ತರು ನೋವುಂಡಿದ್ದು, ಮತ್ತೆ ತಿರುಗಿ ನೋಡುವ ಮಾತನಾಡಿದ್ದಾರೆ. ರೈತರಿಗಾಗಿ ನೂರಾರು ಡೇರಿ ಅಭಿವೃದ್ಧಿಗಾಗಿ ಅನುದಾನ ನೀಡಿದ್ದೇನೆ. ಈಗ ಚೌಡೇಶ್ವರಿ ದೇವಿಯ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ಹಾಗೂ ವೈಯಕ್ತಿಕವಾಗಿಯೂ ಅನುದಾನ ನೀಡುತ್ತೇನೆ ಎಂದರು.
ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಧರ್ಮದಿಂದ ನಡೆದವರಿಗೆ ಎಂದೂ ಧರ್ಮ ಕೈಬಿಡದು. ಅಂತಹ ಧರ್ಮದ ಪಾಲಕರು ನಮ್ಮಲ್ಲಿದ್ದಾರೆ ಎಂದರು.
ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಎಲ್ಲರ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಈ ಸಹಕಾರ ಮನೋಭಾವದಲ್ಲಿ ಗ್ರಾಮದ ಹಾಗೂ ಕ್ಷೇತ್ರದ ಅಭಿವೃದ್ಧಿ ಅಡಗಿದೆ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ಚಿಕ್ಕ ನರಸಿಂಹಯ್ಯ, ಮಧು, ಶ್ರೀನಿವಾಸ್,ನಾಗರಾಜು, ನರಸಿಂಹರಾಜು, ದೇಗುಲ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.