ಕಲಬುರಗಿ: ಹಿಂದೆಂದು ಕಂಡರಿಯದ ಮಳೆಯಾಗಿ ಲೆಕ್ಕಕ್ಕೆಸಿಗದ ಹಾನಿಯಾಗಿರುವುದನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಕಳೆದ ನಾಲ್ಕು ದಿನಗಳಿಂದ 100ಕ್ಕೂ ಅಧಿಕ ಗ್ರಾಮಗಳಿಗೆ ತೆರಳಿ ಖುದ್ದಾಗಿ ಹಾನಿಯನ್ನು ವೀಕ್ಷಿಸುವುದರ ಜತೆಗೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ಬೆಳೆಹಾನಿ, ಕೊಚ್ಚಿಕೊಂಡು ಹೋದ ರಸ್ತೆಗಳು ಹಾಗೂ ಸೇತುವೆಗಳನ್ನು ಖುದ್ದಾಗಿ ವೀಕ್ಷಿಸಿ ಆತ್ಮಾವಲೋಕನನಡೆಸಿದ ಶಾಸಕರು, ವಸ್ತುನಿಷ್ಠವಾಗಿ ಹಾನಿ ಸಮೀಕ್ಷೆನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿರುವ ಶಾಸಕರು, ಅನ್ನ-ಸಾರು ಬದಲು ಚಪಾತಿ, ರೊಟ್ಟಿ ಹಾಗೂ ಪಲ್ಯೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಮೊದಲೇ ಕೈಗೊಂಡಿದ್ದರು. ಪ್ರವಾಹಕ್ಕೆ ಒಳಗಾದ ಗ್ರಾಮಗಳಜನರನ್ನು ಖುದ್ದಾಗಿ ನಿಂತು ಸುರಕ್ಷಿತ ಸ್ಥಳಗಳಿಗೆ ತೆರಳುವಲ್ಲಿ ಮುಂದಾಗಿದ್ದಲ್ಲದೇ ಅಗತ್ಯ ಸಾಮಗ್ರಿಗಳನ್ನು ಸಹ ಶಾಸಕರು ಪೂರೈಸಿದ್ದಾರೆ.
ಸೋಮವಾರ ಲೇಂಗಟಿ, ಮುಗಳಿ, ಮುದ್ದಡಗಾ, ಮಡಕಿ, ವಿ.ಕೆ.ಸಲಗರ, ನರೋಣಾ ಸೇರಿ ಇತರ ಗ್ರಾಮಗಳಿಗೆ ಭೇಟಿನೀಡಿ ಅತಿವೃಷ್ಟಿ ಹಾನಿಯನ್ನು ಅವಲೋಕಿಸಿದರು. ಕಲಬುರಗಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಪ್ರಮುಖ ರಾದ ರೇವಣಸಿದ್ದಪ್ಪ ಮೂಲಗೆ,ಹರ್ಷವರ್ಧನ ಗೂಗಳೆ, ಶಿವರಾಜಗೌಡ ಮುದ್ದಡಗಾ, ಶಾಂತವೀರ ಬಡಿಗೇರ, ಸತೀಶ ಸೂರಡೆ, ದಿವ್ಯ ಹಾಗರಗಿ,ಅನುಪ ಸಲಗರ, ನಾಗರಾಜ ಮೂಲಗೆ, ರಾಜಕುಮಾರ ಮಂಠಾಳೆ ಇದ್ದರು.
ಬೆಳೆ ಹಾನಿಯಾಗಿದ್ದಲ್ಲದೇ ಮನೆಯಲ್ಲಿದ್ದ ದವಸ ಧಾನ್ಯಗಳು ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಗಳು ಬೀಳುತ್ತವೆ. ನೀರು ನಿಂತಿದ್ದರಿಂದ ಬೆಳೆಗಳೆಲ್ಲ ಸಂಪೂರ್ಣ ನಾಶವಾಗಿವೆ.ಪರಿಸ್ಥಿತಿ ಅವಲೋಕಿಸಲುಆಗಮಿಸುವ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಪರಿಹಾರಕ್ಕೆಕೋರಲಾಗುವುದು.
–ಬಸವರಾಜ ಮತ್ತಿಮಡು, ಶಾಸಕ
ಸರಡಗಿ: ಜನಪ್ರತಿನಿಧಿಗಳಿಂದ ಪ್ರವಾಹ ವೀಕ್ಷಣೆ :
ಅಫಜಲಪುರ: ಭೀಮಾ ನದಿ ಪ್ರವಾಹದಿಂದ ಅಫಜಲಪುರ ಮತಕ್ಷೇತ್ರದಲ್ಲಿ ಅವಾಂತರ ಸೃಷ್ಟಿಸಿದೆ. ಅಲ್ಲದೇ ಜೇವರ್ಗಿ, ಕಲಬುರಗಿ ಸೇರಿದಂತೆ ಅನೇಕ ಕಡೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಸರ್ಕಾರ ಪ್ರವಾಹದ ಸಂಪೂರ್ಣಹಾನಿ ಭರಿಸಬೇಕೆಂದು ಶಾಸಕರಾದಎಂ.ವೈ. ಪಾಟೀಲ್, ಡಾ| ಅಜಯಸಿಂಗ್ ಆಗ್ರಹಿಸಿದರು.
ಮತಕ್ಷೇತ್ರದ ಸರಡಗಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದಾಗಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ಸಾವಿರಾರು ಮನೆಗಳು ಬಿದ್ದಿವೆ. ದವಸ ಧಾನ್ಯ ನೀರು ಪಾಲಾಗಿವೆ. ಅನೇಕ ಕಡೆ ಜಾನುವಾರುಗಳು ನೀರು ಪಾಲಾಗಿವೆ. ಹೀಗಾಗಿ ಸರ್ಕಾರ ಸಂತ್ರಸ್ತರಿಗೆ ಹಾನಿಯ ಸಂಪೂರ್ಣ ಪರಿಹಾರ ಭರಿಸಬೇಕು ಎಂದ ಅವರು ಕಳೆದ ಬಾರಿ ಪ್ರವಾಹಬಂದಾಗಲೂ ಅಲ್ಪಸ್ವಲ್ಪ ಪರಿಹಾರಕೊಟ್ಟು ಕೈತೊಳೆದುಕೊಂಡಿದ್ದಾರೆ.ಈ ಬಾರಿಯಾದರೂ ಸಂಪೂರ್ಣಹಾನಿ ಭರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಸದಸ್ಯ ದಿಲೀಪ ಪಾಟೀಲ್, ಮುಖಂಡರಾದ ಸಿದ್ದು ಶಿರಸಗಿ ಇದ್ದರು.