ಹುಣಸೂರು: ಮುಂಬರುವ ಡಿಸೆಂಬರ್ 10 ಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಹರೀಶ್‌ಗೌಡರಿಗೆ ಟಿಕೆಟ್ ಎಂಬ ಗುಲ್ಲು ಹಬ್ಬಿರುವ ಬಗ್ಗೆ ಈ ರೀತಿಯ ಯಾವುದೇ ಪ್ರಸ್ತಾಪವಾಗಿಲ್ಲವೆಂದು ಶಾಸಕ ಎಚ್.ಪಿ.ಮಂಜುನಾಥ್ ಸ್ಪಷ್ಟಪಡಿಸಿದರು.
ಹುಣಸೂರು ಮಿನಿ ವಿಧಾನ ಸೌಧದಲ್ಲಿ ಕ.ಸಾ.ಪ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿದ ಅವರು, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್‌ಗೆ ಎಂ.ಎಲ್.ಸಿ ಟಿಕೆಟ್ ಮತ್ತು ಹರೀಶ್‌ಗೌಡರಿಗೆ ಹುಣಸೂರು ಕ್ಷೇತ್ರಕ್ಕೆ ಸ್ಪರ್ಧೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಹರೀಶ್‌ಗೌಡ, ಅಮರ್‌ನಾಥ್ ಸಹೋದರರಿದ್ದಂತೆ, ನನ್ನ ತ್ಯಾಗದಿಂದ ಇಬ್ಬರಿಗೆ ಒಳ್ಳೆಯದಾಗುತ್ತದೆ ಅಂದರೆ ತುಂಬಾ ಸಂತೋಷದ ವಿಚಾರ, ಆದರೆ ಈ ಸಂಬಂಧ ಎಲ್ಲಿಯೂ ಪ್ರಸ್ತಾಪವಾಗಿಲ್ಲವಲ್ಲ ಎಂದು ಶಾಸಕರು ಮರು ಪ್ರಶ್ನಿಸಿದರು.
ಇಂತಹ ಊಹಾಪೋಹಗಳಿಗೆ ತಾವು ಉತ್ತರಿಸುವುದಿಲ್ಲವೆಂದು ಶಾಸಕ ಎಚ್.ಪಿ.ಮಂಜುನಾಥ್ ಸ್ಪಷ್ಟಪಡಿಸಿದರು. ಈ ವೇಳೆ ಮತಗಟ್ಟೆ ಹೊರಗೆ ಶಾಸಕರ-ಪತ್ರಕರ್ತರ ನಡುವಿನ ಬಿಸಿ ಬಿಸಿ ಚರ್ಚೆ ಕೇಳಿದ ಕಸಾಪ ಚುನಾವಣಾ ಮತಯಾಚಿಸುತ್ತಿದ್ದವರು ಒಮ್ಮೆ ಶಾಕ್ ಆದರೂ ನಂತರ ನಗೆಗಡಲಲ್ಲಿ ತೇಲಿದರು.
ಡಾ.ತಿಮ್ಮಯ್ಯಗೆ ಟಿಕೇಟ್ ನೀಡಿ:
ಈಗಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರು ಈ ಬಾರಿಯೂ ಆದಿಜಾಂಬವ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಉದ್ದೇಶಿಸಿದ್ದು, ಹುಣಸೂರಿನ ಆದಿಜಾಂಬವ ಮುಖಂಡರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಡಾ.ತಿಮ್ಮಯ್ಯರವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದೇನೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.