ಕಾಪು: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 2898.64 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಳ್ಳುತ್ತಿವೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈಗಾಗಲೇ ಸುಮಾರು 500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ. ಉಳಿದಂತೆ 2,398 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳಿಗೆ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಕಾಮಗಾರಿ ಮಂಜೂರಾತಿ ಹಂತದಲ್ಲಿವೆ ಎಂದರು.
ಕುಡಿಯುವ ನೀರಿನ ಯೋಜನೆಗಾಗಿ 1373 ಕೋಟಿ ರೂ., ಕಡಲ್ಕೊರೆತ ತಡೆಗೆ 70 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 258 ಕೋಟಿ ರೂ., ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣ ಕ್ಕೆ 181 ಕೋಟಿ ರೂ., ಕೆಜಿಯಿಂದ ಪಿಜಿ ಹಾಗೂ ತಾಂತ್ರಿಕ ಶಿಕ್ಷಣದವರೆಗಿನ ವ್ಯವಸ್ಥೆಗೆ 150 ಕೋಟಿ ರೂ., ಕಟಪಾಡಿ ಜಂಕ್ಷನ್ ಬಳಿ ಹೆದ್ದಾರಿ ಓವರ್ ಪಾಸ್ ನಿರ್ಮಾಣಕ್ಕೆ 22.71 ಕೋಟಿ ರೂ., ಗ್ರಾಮೀಣ ಭಾಗದಲ್ಲಿ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿ ಗೆ 349.32 ಕೋಟಿ ರೂ., ಮಿನಿ ವಿಧಾನಸೌಧ ನಿರ್ಮಾಣ 10 ಕೋಟಿ ರೂ., ಅಂಬೇಡ್ಕರ್ ಸಮುದಾಯ ಭವನ, ವಸತಿ ನಿಲಯ ನಿರ್ಮಾಣ ಮತ್ತು ಅಭಿವೃದ್ಧಿಗೆ 22.50 ಕೋಟಿ ರೂ., ಆರೋಗ್ಯ ಕೇಂದ್ರಗಳಿಗೆ ಅಂಬುಲೆನ್ಸ್ 50 ಲಕ್ಷ ರೂ., ಕಾಪು ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ತಾನ ಯೋಜನೆಯಡಿ 25 ಕೋಟಿ ರೂ., ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಅಭಿವೃದ್ಧಿಗೆ 10.68 ಕೋಟಿ ರೂ., ಬೆಳಪುವಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ 13 ಕೋಟಿ ರೂ. ಸಹಿತವಾಗಿ ವಿವಿಧ ಯೋಜನೆಗಳು ಅನುದಾನ ಬಿಡುಗಡೆ ಪಟ್ಟಿಯಲ್ಲಿವೆ ಎಂದರು.
ಕಾಪು ವಿಧಾನಸಭಾ ಕ್ಷೇತ್ರದ 26 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 98.46 ಕೋಟಿ ರೂ.ಅನುದಾನ ಮೀಸಲಿಡಲಾಗಿದ್ದು ಮುಖ್ಯ ಮಂತ್ರಿಗಳ ಪರಿಹಾರ ಯೋಜನೆಯಡಿ 356 ಅಶಕ್ತ ಬಡ ಕುಟುಂಬಗಳಿಗೆ ನೆರವಾಗಲು 1.90 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
ಕಾಪು ಲೈಟ್ ಹೌಸ್ ಬಳಿ ಮೀನುಗಾರಿಕಾ ಮಿನಿ ಜೆಟ್ಟಿ – ನಾಡದೋಣಿ ತಂಗುದಾಣ ನಿರ್ಮಾಣ ಯೋಜನೆಗೆ 50 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು 15 ಕೋಟಿ ರೂ. ವೆಚ್ಚದ ಯೋಜನೆಗೆ ತಾಂತ್ರಿಕ ಮಂಜೂರಾತಿ ದೊರಕಿದೆ. ಪಡುಬಿದ್ರಿಯಲ್ಲಿ ಅಗ್ನಿಶಾಮಕ ಠಾಣೆ ಮಂಜೂರು, ಇಎಸ್ಐ ಚಿಕಿತ್ಸಾಲಯ ಮಂಜೂರಾಗಿದ್ದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಯೋಜನೆಗಳು ಅನುದಾನ ಮಂಜೂರಾತಿ ಹಂತದಲ್ಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ಮಟ್ಟು, ಅನಿಲ್ ಶೆಟ್ಟಿ ಮಾಂಬೆಟ್ಟು, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಪುರಸಭಾ ವ್ಯಾಪ್ತಿ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ ಕನ್ಯಾನಗುತ್ತು, ಪ್ರಾಣೇಶ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.