ದೇವನಹಳ್ಳಿ: ಬಯಲು ಸೀಮೆಯ ಪ್ರದೇಶಕ್ಕೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎತ್ತಿನ ಹೊಳೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ,ಕಾಮಗಾರಿಗೆ ಒತ್ತು ನೀಡಿತ್ತು.ಆದರೆಈಗಿನ ಬಿಜೆಪಿ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ, ಅನುದಾನ ಬಿಡುಗಡೆ ಮಾಡಲು ವಿಫಲವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಬೈರೇಗೌಡ ಆರೋಪಿಸಿದರು.
ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎತ್ತಿನಹೊಳೆ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಸಮಸ್ಯೆಬಗೆಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ನಮ್ಮ ಸರ್ಕಾರದಲ್ಲಿ ಈ ಯೋಜನೆಗೆ ವೇಗ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅನುದಾನ ನೀಡದೇ ಕಾಲಹರಣ ಮಾಡುತ್ತಿದೆ. ಮುಂದಿನದಿನಗಳಲ್ಲಿಬಯಲು ಸೀಮೆಯ ಎಲ್ಲಾ ಶಾಸಕರು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ಕೇವಲ ಸಚಿವ ಸ್ಥಾನಕ್ಕಾಗಿಯೇ ಕಚ್ಚಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಮುಂದೆ ನಮ್ಮಕಾಂಗ್ರೆಸ್ ಸರ್ಕಾರ ಬಂದರೆ, ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಚುರುಕು ಗೊಳಿಸಲಿದ್ದೇವೆಂದರು.
ತಮಗೆ ಬೇಕಾದಂತೆ ಮೀಸಲಾತಿ: ಸ್ಥಳೀಯ ಸಂಸ್ಥೆಗಳ ನಗರಸಭೆ ಮತ್ತು ಪುರಸಭೆಗಳ ಅಧ್ಯಕ್ಷರ- ಉಪಾಧ್ಯಕ್ಷರ ಮೀಸಲಾತಿಯಲ್ಲಿ ಅವರಿಗೆ ಇಷ್ಟ ಬಂದ ರೀತಿ ನಿಯಮಾನು ಸಾರವಿಲ್ಲದೆ, ಮೀಸಲಾತಿ ಮಾಡಿದ್ದರಿಂದ ಉಚ್ಚನ್ಯಾಯಾಲಯ, ಸರ್ಕಾರಕ್ಕೆ ಚೀಮಾರಿಹಾಕಿದೆ. ರಾಜಕೀಯ ಸ್ವ-ಹಿತಾಸಕ್ತಿಗೆ ಮೀಸಲಾತಿ ದುರುಪಯೋಗ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ದೂರಿದರು. ಜಿಪಂ ಅಧ್ಯಕ್ಷೆಯಾಗಿದ್ದ ಜಯಮ್ಮ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿತ್ತು. ಕಡೆಯ 10 ತಿಂಗಳ ಅವಧಿಯನ್ನು ಹೊಸಕೋಟೆ ತಾಲೂಕಿಗೆ ಜಿಪಂ ಅಧ್ಯಕ್ಷ ಸ್ಥಾನ ನೀಡಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಪಕ್ಷಾತೀತವಾಗಿ ವಿ.ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಮಾದರಿಯಾಗಿದ್ದೇವೆ: ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿ, ನಮ್ಮ ಜಿಪಂ ಸದಸ್ಯರು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗದೇ ಒಗ್ಗಟ್ಟಿನಿಂದ ಎಲ್ಲರೂ ಮಾದರಿಯಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕಪಾಠ ಕಲಿಸುತ್ತಾರೆಂದರು.
ಶಾಸಕರಾದ ಶರತ್ ಬಚ್ಚೇಗೌಡ, ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಪಂ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಮಾಜಿ ಅಧ್ಯಕ್ಷ ತಿರುವಂಗ ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಪ್ಪ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಪಂ ಸದಸ್ಯರು ಇದ್ದರು.
ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರ್ಪಡೆ ಸಂಬಂಧಿಸಿದಂತೆ, ಈಗಾಗಲೇ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ ನೇತೃತ್ವದಲ್ಲಿ 6 ಸಭೆ ನಡೆಸಿ, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ. ಗ್ರಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಇಂತಿಷ್ಟು ಸ್ಥಾನಗಳನ್ನು ಶರತ್ ಬಚ್ಚೇಗೌಡ ಸ್ವಾಭಿಮಾನದಿಂದ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರ್ಪಡೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
– ಕೃಷ್ಣಬೈರೇಗೌಡ, ಶಾಸಕ