ಭಾಲ್ಕಿ: ತಾಲೂಕಿನ ವ್ಯಾಪ್ತಿಯಲ್ಲಿ ಕೆಆರ್‌ಡಿಐಎಲ್ ಯಡಿ (ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ) ಕೈಗೊಂಡ ಬಹುತೇಕ ಕಾಮಗಾರಿಗಳು ಅಪೂರ್ಣ ಹಾಗೂ ವಿಳಂಬ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಆದರೆ ಅಧಿಕಾರಿಗಳು ವ್ಯವಸ್ಥೆ ಸುಧಾರಣೆಗೆ ಮುಂದಾಗುತ್ತಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ವಿಕಾಸ ಯೋಜನೆಯಡಿ ಚಳಕಾಪುರ ವಾಡಿ, ನೇಳಗಿ, ರುದನೂರು ಸೇರಿ ಮುಂತಾದ ಕಡೆಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ ಸೇರಿ ಮುಂತಾದ ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಬಗ್ಗೆ ದೂರು ಇವೆ. ಇನ್ನು ಚಳಕಾಪುರ ವಾಡಿಯಲ್ಲಿ ಕೊಳವೆ ಬಾವಿ ಕೊರೆಸಿ ಮೂರು ವರ್ಷಗಳು ಕಳೆದಿವೆ. ಆದರೆ, ಇದುವರೆಗೂ ನಿರ್ವಹಣೆ ಹೊಣೆ ಹೊತ್ತಿರುವ ಕೆಆರ್‌ಡಿಐಎಲ್ ಬೋರ್‌ವೆಲ್ಸ್ ಕೊರೆಸಿದ ಮತ್ತು ಮೋಟಾರ್ ಅಳವಡಿಸಿದ ಗುತ್ತಿಗೆದಾರನಿಗೆ ಹಣ ಪಾವತಿಸಿಲ್ಲ. ಹೀಗಾದರೇ ಹೇಗೆ ಎಂದು ಪ್ರಶ್ನಿಸಿದರು.
ವಿಳಂಬ ಆಗಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಪದೇಪದೆ ಹೇಳುತ್ತಿದ್ದೇನೆ. ಆದರೆ ಇಲ್ಲಸಲ್ಲದ ಸಬೂಬು ಹೇಳಿ ಪ್ರತಿಸಲ ತಪ್ಪಿನಿಂದ ನುಣಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇನ್ಮುಂದಾದರೂ ಎಚ್ಚೆತ್ತುಕೊಂಡು ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ. ಇಲ್ಲದಿದ್ದರೆ ಕೆಆರ್ ಡಿಐಎಲ್ ಅನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಶಿಲ್ಪಾ, ತಹಶೀಲ್ದಾರ್ ಕೀರ್ತಿಚಾಲಕ್, ತಾಪಂ ಇಒ ದೀಪಿಕಾ ನಾಯ್ಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.