ಬೆಳಗಾವಿ: ರಾಜ್ಯದ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ಸೇರಿದಂತೆ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷರಾಗಿ ರಾಜೇಂದ್ರ ವಿರುಪಾಕ್ಷಪ್ಪ ಹಂಜಿ ಹಾಗೂ ಬಸವರಾಜ ಶಿವಲಿಂಗಪ್ಪ ತಟವಟಿ ಅವರು ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಸದಸ್ಯರಾಗಿ ಪ್ರಭಾಕರ ಬಸಪ್ರಭು ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಅಮಿತ ಪ್ರಭಾಕರ ಕೋರೆ, ಶ್ರೀಶೈಲಪ್ಪ ಚನ್ನಪ್ಪ ಮೆಟಗುಡ್, ಜಯಾನಂದ ಊರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಶಂಕರಣ್ಣ ಈಶ್ವರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನೀಲ ವಿಜಯಬಸಪ್ಪ ಪಟ್ಟೇದ, ವಿರುಪಾಕ್ಷಿ ಶಿವಲಿಂಗಪ್ಪ ಸಾಧುನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ಇದುವರೆಗೆ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನೂತನ ಪದಾಧಿಕಾರಿಗಳ ಆಯ್ಕೆಯ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯು 104 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಸತ್ಯ, ಪ್ರಾಮಾಣಿಕ ಸೇವೆ, ತ್ಯಾಗ, ಧ್ಯೇಯಗಳೊಂದಿಗೆ ಸಪ್ತರ್ಷಿಗಳಿಂದ ಸ್ಥಾಪನೆಗೊಂಡ ಸಂಸ್ಥೆಯ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಂಡಿರುವ ಕೆಎಲ್‌ಇ ಸಂಸ್ಥೆ ಸದಸ್ಯರ ಆದೇಶಕ್ಕೆ ತಲೆ ಬಾಗಿದೆ. ಸದಸ್ಯರು ನಮ್ಮ ಮೇಲೆ ಇಟ್ಟ ವಿಶ್ವಾಸ ಹಾಗೂ ನಂಬಿಕೆಗೆ ಧಕ್ಕೆ ಉಂಟುಮಾಡದೆ ಶೈಕÒಣಿಕ, ಆರೋಗ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಂಸ್ಥೆ ಅದ್ವಿತೀಯವಾದುದನ್ನು ಸಾಧಿಸಿ ತೋರಿಸಿದೆ. ಇದಕ್ಕೆ270ಕ್ಕೂ ಹೆಚ್ಚು ಅಂಗಸಂಸ್ಥೆಗಳು ದೇಶಾದ್ಯಂತ ವಿಸ್ತರಿಸಿರುವುದು, 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಹಾಗೂ 16,000 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದೇ ಸಾಕ್ಷಿ ಎಂದರು.
ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಈ ವರ್ಷದ ಕೆಎಲ್‌ಇ ಸೊಸೈಟಿ ಬಜೆಟ್ 2000 ಕೋಟಿ ಮೀರಲಿದೆ. ಹುಬ್ಬಳ್ಳಿಯಲ್ಲಿ 35 ಎಕರೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ ವೆಚ್ಚದಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ 600 ಹಾಸಿಗೆಗಳ ಆಸ್ಟರ್ ಕೆಎಲ್‌ಇಆಸ್ಪತ್ರೆ, ನವಿ ಮುಂಬೈನಲ್ಲಿ ಕೆಎಲ್‌ಇ ಸಿಬಿಎಸ್‌ಇ ಸ್ಕೂಲ್, ಪುಣೆಯಲ್ಲಿ 250 ಹಾಸಿಗೆಗಳ ಆಸ್ಪತ್ರೆ, ಬೆಳಗಾವಿಯಲ್ಲಿ 250 ಹಾಸಿಗೆಗಳ ಕ್ಯಾನ್ಸರ್‌ಆಸ್ಪತ್ರೆ, ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಮಹಾಂತೇಶ ಕೌಜಲಗಿ, ಮಹಾಂತೇಶ ಕವಟಗಿಮಠ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಕೌಜಲಗಿ, ಅಮಿತ್ ಕೋರೆ ಹಾಗೂ ಚುನಾವಣಾಧಿಕಾರಿ ಡಾ. ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.