ಪಿರಿಯಾಪಟ್ಟಣ: ಮುಂದಿನ ದಿನಗಳಲ್ಲಿ ಶ್ರೀ ಕನ್ನಂಬಾಡಿಯಮ್ಮ ಹಾಗೂ ಮಸಣೀಕಮ್ಮ ಜಾತ್ರಾ ಮಹೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಅತ್ಯುತ್ತಮ ದೀಪಾಲಂಕಾರ ಅಳವಡಿಸಿದ ಕಟ್ಟಡದ ಮಾಲೀಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣದ ಗ್ರಾಮದೇವತೆಗಳಾದ ಶ್ರೀ ಕನ್ನಂಬಾಡಿಯಮ್ಮ ಹಾಗೂ ಮಸಣೀಕಮ್ಮನವರ ಜಾತ್ರಾ ಮಹೋತ್ಸವಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ ಈ ಶಕ್ತಿ ದೇವತೆಗಳ ಜಾತ್ರ ಮಹೋತ್ಸವಕ್ಕೆ ಹೊರ ರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದಾರೆ. ಪಟ್ಟಣದ ಹೃದಯ ಭಾಗ ಸೇರಿದಂತೆ ಪುರಸಭೆಯ ಗಡಿ ವರೆಗೂ ಹಬ್ಬದ ರೀತಿಯಲ್ಲಿ ಸಜ್ಜುಗೊಳಿಸಲು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು. ಬಿ.ಎಂ. ರಸ್ತೆಯಲ್ಲಿರುವ ಎಲ್ಲ ಕಟ್ಟಡದ ಮಾಲೀಕರು ಸೇರಿದಂತೆ ಸರ್ಕಾರಿ ಕಚೇರಿಗಳು ತಮ್ಮ ತಮ್ಮ ಕಟ್ಟಡಗಳನ್ನು ಶೃಂಗಾರಗೊಳಿಸಿ ದೀಪಾಲಂಕಾರಗಳಿಂದ ಅಲಂಕಾರ ಮಾಡಲು ಮುಂದಾಗಬೇಕು ಆಗ ಮಾತ್ರ ಅರ್ಥಪೂರ್ಣ ಜಾತ್ರೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು, ಅಭಿಮಾನಿ ಬಳಗದವರು, ಮುಖಂಡರುಗಳಿಂದ ಅನ್ನಸಂತರ್ಪಣೆಯನ್ನು ಮಾಡುತ್ತಿರುವುದರಿಂದ ಜಾತ್ರೆಗೆ ಮತ್ತಷ್ಟು ಮೆರುಗು ಬಂದಿದೆ. ಹಿಂದೆ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಿದ ಕಟ್ಟಡದ ಮಾಲಿಕರಿಗೆ ಬಹುಮಾನ ನೀಡುತ್ತಿಲ್ಲ ಎಂಬ ಆಪಾದನೆಯೂ ಕೇಳಿ ಬರುತ್ತಿತ್ತು. ಆದ್ದರಿಂದ ಜಾತ್ರೆ ಮುಗಿದ ತಕ್ಷಣವೇ ಬಹುಮಾನ ವಿತರಣೆ ಮಾಡಲಾಗುತ್ತಿದೆ. ಅತ್ಯುತ್ತಮ ದೀಪಾಲಂಕಾರದೀಂದ ಸಾರ್ವಜನಿಕರನ್ನು ಆಕರ್ಷಿಸಿದ ಪಟ್ಟಣದ ಪುರಸಭೆಗೆ 1 ಲಕ್ಷ ಪ್ರಥಮ ಬಹುಮಾನವನ್ನು ನೀಡಲಾಗಿದ್ದು, ಪಟ್ಟಣದ ಬಿ.ಎಂ.ರಸ್ತೆಯ ಶ್ರೀ ವೆಂಕಟೇಶ್ವರ ಸೌಂಡ್&ಶಾಮಿಯಾನದ ಮಾಲೀಕ ಪಿ.ಟಿ.ತಿಮ್ಮು ರವರಿಗೆ ದ್ವಿತೀಯ ಬಹುಮಾನವಾಗಿ 50 ಸಾವಿರ ಹಾಗೂ ತಾಲ್ಲೂಕು ಆಡಳಿತ ಭವನವು ತೃತೀಯ ಬಹುಮಾನ 25 ಸಾವಿರ ರೂ ಗಳನ್ನು ಪಡೆದುಕೊಂಡಿವೆ ಎಂದು ಘೋಷಿಸಿದರು. ಪುರಸಭೆಯ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಚಂದ್ರಮೌಳಿ’ ತಾ ಪಂ ಇಒ ಕೃಷ್ಣಕುಮಾರ್, ಪುರಸಭಾ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ ಅಧ್ಯಕ್ಷ ಮಂಜುನಾಥ್ ಸಿಂಗ್ , ಉಪಾಧ್ಯಕ್ಷೆ ನಾಗರತ್ನ, ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.